ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ತನ್ನ ಪ್ರಯಾಣಿಕರ ವಿಮಾನಯಾನ ಅನುಭವವನ್ನು ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಐಷಾರಾಮಿಯಾಗಿಸುವ ಉದ್ದೇಶದಿಂದ ʼಕೇರ್ ಬೈ ಬಿಎಲ್‌ಆರ್’ ಎಂಬ ಹೊಸ ವೈಯಕ್ತಿಕ ಸೇವಾ ಬ್ರ್ಯಾಂಡ್ ಅನ್ನು ಪರಿಚಯಿಸಿದೆ.
ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಓಡಾಡುವಾಗ ಆಗುವ ಸುಸ್ತು ಹಾಗೂ ಗೊಂದಲಗಳನ್ನು ನಿವಾರಿಸಿ, ಪ್ರತಿಯೊಬ್ಬರಿಗೂ ಅವರ ಅಗತ್ಯಕ್ಕೆ ತಕ್ಕಂತೆ ವಿಐಪಿ ಫೀಲ್ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ಈ ಸೇವೆಗಳು ಲಭ್ಯವಿದ್ದು, ವಿಮಾನಗಳ ವೇಳಾಪಟ್ಟಿಗೆ ಅನುಗುಣವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ.
ಬುಕ್ಕಿಂಗ್ ಮಾಡುವುದು ಹೇಗೆ?
ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿರುವ ʼಬಿಎಲ್‌ಆರ್ ಪಲ್ಸ್ ಆ್ಯಪ್’, ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ (www.bengaluruairport.com/carebyblr) ಅಥವಾ ಏರ್‌ಪೋರ್ಟ್‌ನ ಕೌಂಟರ್‌ಗಳ ಮೂಲಕ ಈ ಪ್ರೀಮಿಯಂ ಸೇವೆಗಳನ್ನು ಸುಲಭವಾಗಿ ಬುಕ್ ಮಾಡಬಹುದು. ವಾಕ್ ಇನ್ ಸೇವೆಗಳೂ ಲಭ್ಯವಿದ್ದರೂ, ಮುಂಗಡವಾಗಿ ಬುಕ್ ಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗಿದೆ.
‘ಕೇರ್ ಬೈ ಬಿಎಲ್‌ಆರ್’ ಅಡಿಯಲ್ಲಿ ಸಿಗುವ 10 ಪ್ರಮುಖ ಸೇವೆಗಳು ಇಲ್ಲಿವೆ
1. ಮೀಟ್ ಅಂಡ್ ಅಸಿಸ್ಟ್ (ವಿಶೇಷ ನೆರವು): ಏರ್‌ಪೋರ್ಟ್‌ಗೆ ಕಾಲಿಟ್ಟಾಗಿನಿಂದ ಚೆಕ್-ಇನ್, ಭದ್ರತಾ ತಪಾಸಣೆ, ಇಮಿಗ್ರೇಷನ್ ಮತ್ತು ಲಗೇಜ್ ಪಡೆಯುವವರೆಗೆ ಪ್ರತಿಯೊಂದು ಹಂತದಲ್ಲೂ ತರಬೇತಿ ಪಡೆದ ಸಿಬ್ಬಂದಿ ನಿಮ್ಮ ಜೊತೆಯಿದ್ದು ಸಂಪೂರ್ಣ ಸಹಾಯ ಮಾಡಲಿದ್ದಾರೆ.
2. ಐಷಾರಾಮಿ ಲಿಮೋ ಸೇವೆ: ಏರ್‌ಪೋರ್ಟ್‌ನಿಂದ ನಗರಕ್ಕೆ ಅಥವಾ ನಗರದಿಂದ ಏರ್‌ಪೋರ್ಟ್‌ಗೆ ಬರಲು ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರುಗಳ (ಚಾಲಕಸಹಿತ) ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
3. ಹೂವು ಮತ್ತು ಬೊಕೆ ಸೇವೆ: ನಿಮ್ಮ ಪ್ರೀತಿಪಾತ್ರರನ್ನು ಸ್ವಾಗತಿಸಲು, ಸರ್ಪ್ರೈಸ್ ಮಾಡಲು ಅಥವಾ ಬೀಳ್ಕೊಡಲು ಸುಂದರವಾದ, ತಾಜಾ ಹೂವಿನ ಬೊಕೆಗಳನ್ನು ಇಲ್ಲಿಯೇ ಒದಗಿಸಲಾಗುತ್ತದೆ.
4. ಕೇರ್ ಬೈ ಬಿಎಲ್‌ಆರ್ ಲೌಂಜ್ (ಟಿ-1): ಪ್ರಯಾಣಿಕರು ಮತ್ತು ಅವರ ಜೊತೆ ಬಂದವರಿಗಾಗಿ ಇದೊಂದು ಆರಾಮದಾಯಕ ವಿಶ್ರಾಂತಿ ತಾಣವಾಗಿದೆ. ಇಲ್ಲಿ ರಿಫ್ರೆಶ್‌ಮೆಂಟ್ ಹಾಗೂ ಬ್ಯುಸಿನೆಸ್ ಮೀಟಿಂಗ್‌ಗಳನ್ನು ನಡೆಸಲು ಪ್ರತ್ಯೇಕ ಸಭಾಂಗಣವೂ ಇದೆ.
5. ಲಗೇಜ್ ಸ್ಟೋರೇಜ್: ವಿಮಾನ ತಡವಿದ್ದರೆ ನಿಮ್ಮ ಲಗೇಜ್ ಅನ್ನು ಹೊತ್ತುಕೊಂಡು ತಿರುಗಬೇಕಿಲ್ಲ. ಇಲ್ಲಿ ನಿಮ್ಮ ಲಗೇಜ್ ಅನ್ನು ಸುರಕ್ಷಿತವಾಗಿಟ್ಟು ನೀವು ನಿರಾಳವಾಗಿ ಬೆಂಗಳೂರು ನಗರ ಸುತ್ತಾಡಿಕೊಂಡು ಬರಬಹುದು.
6. ವ್ಯಾಲೆಟ್ ಪಾರ್ಕಿಂಗ್: ಪಾರ್ಕಿಂಗ್ ಜಾಗ ಹುಡುಕುವ ಟೆನ್ಷನ್ ಇನ್ಮುಂದೆ ಇಲ್ಲ. ನಿಮ್ಮ ಕಾರನ್ನು ಎಂಟ್ರಿಯಲ್ಲೇ ಸಿಬ್ಬಂದಿಗೆ ಒಪ್ಪಿಸಿ ನೀವು ನೇರವಾಗಿ ಟರ್ಮಿನಲ್ ಒಳಗೆ ಹೋಗಬಹುದು.
7. ಪೋರ್ಟರ್ ಸೇವೆ: ನಿಮ್ಮ ಲಗೇಜ್ ಹೊತ್ತೊಯ್ಯಲು ವೃತ್ತಿಪರ ತರಬೇತಿ ಪಡೆದ ಸಮವಸ್ತ್ರಧಾರಿ ಸಿಬ್ಬಂದಿ (ಪೋರ್ಟರ್‌ಗಳು) ಸಹಾಯ ಮಾಡಲಿದ್ದಾರೆ.
8. ಬ್ಯಾಗೇಜ್ ರಾಪಿಂಗ್: ನಿಮ್ಮ ಬ್ಯಾಗ್‌ಗಳಿಗೆ ಗೀರು ಬೀಳದಂತೆ, ಧೂಳು ತಾಕದಂತೆ ಮತ್ತು ಬೇರೆಯವರು ತೆರೆಯದಂತೆ ರಕ್ಷಣಾತ್ಮಕ ಕವರ್ ಹಾಕಿಕೊಡಲಾಗುತ್ತದೆ.
9. ಕಾರ್ ಸ್ಪಾ: ನೀವು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ಏರ್‌ಪೋರ್ಟ್‌ನಲ್ಲಿ ಪಾರ್ಕ್ ಮಾಡಿರುವ ನಿಮ್ಮ ಕಾರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ಲೀನಿಂಗ್ ಸೇವೆ ಲಭ್ಯವಿದೆ.
10. ಏರ್‌ಸೈಡ್ ಲಿಮೋ (ವಿಐಪಿ ಸೇವೆ): ವಿಐಪಿಗಳು, ಸೆಲೆಬ್ರಿಟಿಗಳು ಹಾಗೂ ವಿಶೇಷ ನೆರವು ಬೇಕಾದವರಿಗಾಗಿ ಟರ್ಮಿನಲ್‌ನಿಂದ ನೇರವಾಗಿ ವಿಮಾನದ ಬಳಿಗೆ ಐಷಾರಾಮಿ ವಾಹನದಲ್ಲಿ ಕರೆದೊಯ್ಯುವ ವಿಶೇಷ ಸೇವೆ ಇದಾಗಿದೆ.
ಸದ್ಯಕ್ಕೆ ಈ 10 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಈ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.





