ಬೆಂಗಳೂರು, ಜನವರಿ 02, 2026: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (AQI) ದಿನದಿಂದ ದಿನಕ್ಕೆ ಆತಂಕಕಾರಿ ಮಟ್ಟವನ್ನು ತಲುಪುತ್ತಿದೆ. ಇಂದಿನ ವರದಿಯ ಪ್ರಕಾರ ನಗರದ ಸರಾಸರಿ ವಾಯು ಗುಣಮಟ್ಟ 161 ದಾಖಲಾಗಿದ್ದು, ಇದು ಅನಾರೋಗ್ಯಕರ ಹಂತಕ್ಕೆ ಸೇರಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅಲ್ಪ ಸುಧಾರಣೆ ಕಂಡುಬಂದರೂ, ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳ ಪ್ರಕಾರ ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ.
ನಗರದ ಯಾವ ಭಾಗಗಳಲ್ಲಿ ಮಾಲಿನ್ಯ ಹೆಚ್ಚು ?
ಬೆಂಗಳೂರಿನ ಬಹುತೇಕ ವಸತಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ವಿಶೇಷವಾಗಿ ವೈಟ್ ಫೀಲ್ಡ್ ಭಾಗದಲ್ಲಿ ಮಾಲಿನ್ಯದ ಪ್ರಮಾಣ ಅತಿ ಹೆಚ್ಚಿದೆ. ವಿವಿಧ ಪ್ರದೇಶಗಳ ಇಂದಿನ AQI ಅಂಕಿಅಂಶಗಳು ಹೀಗಿವೆ:
-
ವೈಟ್ ಫೀಲ್ಡ್: 189
-
ಜಯನಗರ: 175
-
ಕೋರಮಂಗಲ: 172
-
ತಾವರೆಕೆರೆ: 170
-
ಸಿಲ್ಕ್ ಬೋರ್ಡ್: 168
-
ಅರೆಕೆರೆ: 165
-
ಬ್ರೂಕ್ ಫೀಲ್ಡ್: 163
-
ಹೆಬ್ಬಾಳ: 161
-
ಬ್ರಿಗೇಡ್ ರೋಡ್: 158
-
ಬಿಟಿಎಂ ಲೇಔಟ್: 158
-
ಬಾಪೂಜಿ ನಗರ: 154
PM2.5 ಮತ್ತು PM10: ಅಡಗಿರುವ ಅಪಾಯಗಳೇನು ?
ಇಂದಿನ ಗಾಳಿಯಲ್ಲಿ PM2.5 ಕಣಗಳ ಪ್ರಮಾಣ 70 ಮತ್ತು PM10 ಕಣಗಳ ಪ್ರಮಾಣ 95 ರಷ್ಟಿದೆ. ಈ ಅಂಕಿಅಂಶಗಳು ತಾಂತ್ರಿಕವಾಗಿ ಕಂಡರೂ, ಇವುಗಳ ಪ್ರಭಾವ ಭೀಕರವಾಗಿದೆ.
-
PM10: ಇವು ನಮ್ಮ ಕೂದಲಿನ ಎಳೆಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳು.
-
PM2.5: ಇವು ಮಾನವನ ಕೂದಲಿನ ಕೇವಲ 3% ರಷ್ಟು ದಪ್ಪವಿರುವ ಅತಿ ಸೂಕ್ಷ್ಮ ಕಣಗಳು.
ಈ ಸೂಕ್ಷ್ಮ ಕಣಗಳು ನಾವು ಉಸಿರಾಡುವಾಗ ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸಿ, ಅಲ್ಲಿಂದ ರಕ್ತನಾಳಗಳಿಗೆ ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ತೀವ್ರ ಸ್ವರೂಪದ ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಎದುರಾಗುತ್ತದೆ. WHO ನಿಗದಿಪಡಿಸಿರುವ ಮಿತಿಗಿಂತ 5 ಪಟ್ಟು ಹೆಚ್ಚು ಮಾಲಿನ್ಯವಿರುವುದು ನಗರದ ಜನರ ಜೀವಕ್ಕೆ ಸಂಚಕಾರ ತಂದಿದೆ.
ರಾಜ್ಯದ ಇತರ ನಗರಗಳ ಸ್ಥಿತಿ
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ವಾಯು ಗುಣಮಟ್ಟ ಹದಗೆಟ್ಟಿದೆ. ಬಳ್ಳಾರಿ ನಗರವು 185 AQI ನೊಂದಿಗೆ ಅತಿ ಹೆಚ್ಚು ಮಾಲಿನ್ಯ ಹೊಂದಿದ್ದರೆ, ಹುಬ್ಬಳ್ಳಿ 96 AQI ನೊಂದಿಗೆ ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದೆ.
-
ಬಳ್ಳಾರಿ: 185
-
ಶಿವಮೊಗ್ಗ: 168
-
ಮಂಗಳೂರು: 160
-
ಬೆಳಗಾವಿ: 152
-
ಮೈಸೂರು: 126
ಮಾಲಿನ್ಯಕ್ಕೆ ಮುಖ್ಯ ಕಾರಣಗಳೇನು ?
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದೆ. ವಾಹನಗಳಿಂದ ಹೊರಸೂಸುವ ದಟ್ಟ ಹೊಗೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಂದ ಏಳುವ ಧೂಳು ಮತ್ತು ಹಸಿರು ವಲಯದ ನಾಶವೇ ಈ ಮಾಲಿನ್ಯಕ್ಕೆ ಮೂಲ ಕಾರಣ. ವಾಯು ಗುಣಮಟ್ಟ 150 ದಾಟಿದಾಗ ಶ್ವಾಸಕೋಶದ ಸಮಸ್ಯೆ ಇರುವವರು ಮಾತ್ರವಲ್ಲದೆ, ಆರೋಗ್ಯವಂತ ವ್ಯಕ್ತಿಗಳೂ ಉಸಿರಾಟದ ತೊಂದರೆ ಅನುಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.





