ಬಳ್ಳಾರಿ: ನಗರದಲ್ಲಿ ಜನವರಿ 1ರಂದು ಬ್ಯಾನರ್ ಕಟ್ಟುವ ವಿಚಾರವಾಗಿ ಆರಂಭವಾದ ಗಲಾಟೆ, ಗುಂಡಿನ ಚಕಮಕಿಗೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಎಂಬುವವರ ಮೂವರು ಖಾಸಗಿ ಗನ್ ಮ್ಯಾನ್‌ಗಳನ್ನು ಬ್ರೂಸ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ಮೂಲದ ಗನ್ ಮ್ಯಾನ್‌ಗಳ ಅರೆಸ್ಟ್
ಬಂಧಿತರನ್ನು ಪಂಜಾಬ್ ಮೂಲದ ಬಲ್ಕಿತ್ ಸಿಂಗ್, ಮಹೇಂದ್ರ ಸಿಂಗ್ ಮತ್ತು ಗುರುಚರಣ ಸಿಂಗ್ ಎಂದು ಗುರುತಿಸಲಾಗಿದೆ. ಹೊಸ ವರ್ಷದ ದಿನದಂದು ನಡೆದ ಸಂಘರ್ಷದ ವೇಳೆ ಈ ಮೂವರು ತಮ್ಮಲ್ಲಿದ್ದ ಆಯುಧಗಳಿಂದ ಫೈರಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಗುಂಡಿನ ದಾಳಿಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕಡೆಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜಕೀಯ ಸಂಘರ್ಷ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಬಂಧನ
ಈ ಪ್ರಕರಣ ಕೇವಲ ಫೈರಿಂಗ್‌ಗೆ ಸೀಮಿತವಾಗಿಲ್ಲ, ಬದಲಾಗಿ ಬಳ್ಳಾರಿಯ ರಾಜಕೀಯ ಬದ್ಧ ವೈರಿಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ. ಗುಂಪು ಘರ್ಷಣೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪೊಲೀಸರು ಇದುವರೆಗೆ ಒಟ್ಟು 26 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ 10 ಬಿಜೆಪಿ ಕಾರ್ಯಕರ್ತರು ಮತ್ತು ಉಳಿದವರು ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗಿದೆ.
ಬಂಧಿತ ಗನ್ ಮ್ಯಾನ್‌ಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಇರಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಬಂಧಿತ ಬಿಜೆಪಿ ಕಾರ್ಯಕರ್ತರನ್ನು ಬಳ್ಳಾರಿ ಗ್ರಾಮಾಂತರ ಠಾಣೆಗೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ.
ತನಿಖೆಯ ಹಾದಿ ಮತ್ತು ಬಿಗಿ ಭದ್ರತೆ
ಬ್ಯಾನರ್ ವಿಚಾರವಾಗಿ ಶುರುವಾದ ಸಣ್ಣ ಕಿಡಿ ಇಡೀ ನಗರದಲ್ಲಿ ಆತಂಕ ಮೂಡಿಸಿತ್ತು. ಫೈರಿಂಗ್ ನಡೆಸಲು ಗನ್ ಮ್ಯಾನ್‌ಗಳಿಗೆ ಆದೇಶ ನೀಡಿದ್ದು ಯಾರು ? ಕಾನೂನುಬದ್ಧವಾಗಿ ಅವರು ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿ ಇತ್ತೇ ? ಎಂಬಿ ಇತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಟ್ಟಾರೆ ಬ್ಯಾನರ್ ವಿಚಾರವಾಗಿ ಜಗಳವಾದ ಈ ಪ್ರಕರಣದಲ್ಲಿ ಒಬ್ಬ ವ್ತಕ್ತಿಯ ಪ್ರಾಣ ಹೋಗುವ ವರೆಗೆ ಹೋಗಿರುವುದು ಶೋಷನೀಯ, ಈ ಬಗ್ಗೆ ಅಧಿಕಾರಿಗಳ ಮುಂದಿನ ಕ್ರಮ ಏನು ಎಂಬುದನ್ನ ಕಾದುನೋಡಬೇಕಿದೆ.





