ಬೆಳಗಾವಿ: ತಾಯಿಯೊಬ್ಬಳು ತನ್ನ ನವಜಾತ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ. ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮಕ್ಕೆ ಸೇರಿದ ಅಶ್ವಿನಿ ಹಣಮಂತ ಹಳಕಟ್ಟಿ (28) ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ, ನಾಲ್ಕನೇ ಬಾರಿಗೆ ಹೆಣ್ಣು ಮಗು ಜನಿಸಿದ ಹಿನ್ನೆಲೆಯಲ್ಲಿ ಈ ದುರಂತಕ್ಕೆ ಮುಂದಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಅಶ್ವಿನಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳು ಇದ್ದರು. ನಾಲ್ಕನೇ ಗರ್ಭಧಾರಣೆಯಲ್ಲಿ ಗಂಡು ಮಗು ಜನಿಸುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ ಅಶ್ವಿನಿಗೆ, ಮತ್ತೆ ಹೆಣ್ಣು ಮಗು ಹುಟ್ಟಿದ್ದು, ಇದರಿಂದ ಕೋಪಗೊಂಡು ಮಗುವಿನ ಕತ್ತು ಹಿಸುಕಿಕೊಂದಿದ್ದಾಳೆ ಎನ್ನಲಾಗಿದೆ.
ಘಟನೆಯ ದಿನ ಬೆಳಿಗ್ಗೆ ಬಾಣಂತಿಯರ ವಾರ್ಡಿನಲ್ಲಿ ಕೆಲಕಾಲ ಯಾರೂ ಇರದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಶ್ವಿನಿ ಒಬ್ಬಳೇ ಇದ್ದ ವೇಳೆ ಈ ಕೃತ್ಯ ಎಸಗಿದ್ದಾಳೆ.
ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ತಾಯಿಯೊಬ್ಬಳು ತಾನು ಹೆತ್ತ 6 ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಶ್ವೇತಾ ಎಂಬ ಮಹಿಳೆಯು ತನ್ನ ಮಗಳಾದ ಸಾನ್ವಿಯನ್ನು ಕೊಂದ ಆರೋಪ ಕೇಳಿಬಂದಿದೆ.
ಘಟನೆಯ ವಿವರ
ಶನಿವಾರ ಬೆಂಗಳೂರಿನಿಂದ ತನ್ನ ತವರು ಮನೆಗೆ 6 ವರ್ಷದ ಮಗಳು ಸಾನ್ವಿಯನ್ನು ಕರೆತಂದಿದ್ದ ಶ್ವೇತಾ, ಭಾನುವಾರ ಬೆಳಿಗ್ಗೆ ಗ್ರಾಮದ ಕಟ್ಟೆಯ ಕಡೆಗೆ ಹೋಗುವುದಾಗಿ ಮಗುವನ್ನು ಕರೆದೊಯ್ದಿದ್ದಳು. ಆದರೆ, ಜಮೀನಿನ ಬಳಿಯ ನೀರಿನಲ್ಲಿ ಮಗಳನ್ನು ಮುಳುಗಿಸಿ ಕೊಲೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಮಗುವಿನ ಕೂಗಾಟ ಕೇಳಿ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಸಾನ್ವಿಯನ್ನು ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ, ಬಾಲಕಿ ಸಾವನ್ನಪ್ಪಿದ್ದಾಳೆ.
ಶ್ವೇತಾ ಏಳು ವರ್ಷಗಳ ಹಿಂದೆ ಶಿವಮೊಗ್ಗ ಮೂಲದ ರಘು ಎಂಬಾತನನ್ನು ವಿವಾಹವಾದಳು. ಆದರೆ, ಮದುವೆಯಾದ ಎರಡು ವರ್ಷಗಳಲ್ಲೇ ದಂಪತಿಗಳ ನಡುವೆ ಜಗಳ ಶುರುವಾಯಿತು. ಕಳೆದ ನಾಲ್ಕು ವರ್ಷಗಳಿಂದ ಶ್ವೇತಾ ತನ್ನ ಪತಿಯಿಂದ ದೂರವಾಗಿದ್ದಳು. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಶ್ವೇತಾ, ಮಗಳ ಆರೈಕೆಯ ಜವಾಬ್ದಾರಿಯನ್ನು ರಘುವಿನ ಪೋಷಕರಿಗೆ ವಹಿಸಲಾಗಿತ್ತು. ಆದರೆ, ಶನಿವಾರ ಶ್ವೇತಾ ಸಾನ್ವಿಯನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದಳು.
ಮಗಳ ಕೊಲೆಗೆ ಯತ್ನಿಸಿದ ಶ್ವೇತಾ, ರಕ್ಷಣೆಗೆ ಓಡಿಬಂದ ಗ್ರಾಮಸ್ಥರ ಮುಂದೆ, “ನಾನು ಮತ್ತು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು” ಎಂದು ಹೇಳಿಕೊಂಡಿದ್ದಾಳೆ. ಆದರೆ, ಗ್ರಾಮಸ್ಥರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆತಂದರೂ, ಸಾನ್ವಿಯ ಪ್ರಾಣ ಉಳಿಯಲಿಲ್ಲ. ಸಾನ್ವಿಯ ಸಾವಿನ ಸುದ್ದಿ ಕೇಳಿ ತಂದೆ ರಘು ಮತ್ತು ಕುಟುಂಬಸ್ಥರು ಶವಾಗಾರಕ್ಕೆ ಧಾವಿಸಿದರು. ರಘು ತನ್ನ ಮಗಳ ಸಾವಿನಿಂದ ಕಣ್ಣೀರಿಟ್ಟಿದ್ದಾರೆ.
ಶವಾಗಾರದ ಬಳಿ ಶ್ವೇತಾ ಮತ್ತು ರಘುವಿನ ಕುಟುಂಬಸ್ಥರ ನಡುವೆ ತೀವ್ರ ಗಲಾಟೆ ನಡೆಯಿತು. ಎರಡೂ ಕಡೆಯ ಸಂಬಂಧಿಕರು ಪರಸ್ಪರ ಜಗಳವಾಡಿ, ಬಡಿದಾಡಿಕೊಂಡರು. ಈ ಸಂದರ್ಭದಲ್ಲಿ ಹಿರಿಸಾವೆ ಠಾಣೆಯ ಪಿಎಸ್‌ಐ ರೂಪಾ ಬಿರಾದಾರ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಗೆ ಸಂಬಂಧಿಸಿದಂತೆ ಹಿರಿಸಾವೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.





