ಬೆಳಗಾವಿ: ಗ್ರಾಮ ಪಂಚಾಯತ್ ಅಧ್ಯಕ್ಷನೊಬ್ಬ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮಶಿ ಕಾಲಿಮಣಿ (45) ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಾನೆ.
2023ರ ನವೆಂಬರ್ 5ರಂದು ಭೀಮಶಿ ಕಾಲಿಮಣಿ ಈ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಎಂದು ತಿಳಿದುಬಂದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ ಎಂಬುದು ಈ ವಿವಾದವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಭೀಮಶಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಯಾದ ಭೀಮಶಿ ಈಗ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಘಟನೆ ಬೆಳಕಿಗೆ ಬಂದ ಬಳಿಕ, ಮಕ್ಕಳ ರಕ್ಷಣಾ ತಂಡದ ಅಧಿಕಾರಿಗಳು ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಆದರೆ, ಬಾಲಕಿಯನ್ನು ಪತ್ತೆ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ. ಭೀಮಶಿ ಸ್ಥಳೀಯ ಪ್ರಭಾವಿಗಳ ಹೆಸರು ದುರ್ಬಳಕೆ ಮಾಡಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ, ಆತ ತನ್ನ ಪತ್ನಿಯನ್ನು ಅಪ್ರಾಪ್ತ ವಯಸ್ಸಿನವಳು ಎಂದು ಸಾಬೀತುಪಡಿಸಲು ನಕಲಿ ಜನನ ಪ್ರಮಾಣಪತ್ರವನ್ನು ವೈರಲ್ ಮಾಡಿದ್ದಾನೆ ಎಂಬ ಆರೋಪವೂ ಇದೆ. ಆದರೆ, ಅಧಿಕಾರಿಗಳು ಈ ದಾಖಲೆಗಳನ್ನು ಹೋಲಿಕೆ ಮಾಡಿದಾಗ, ಆಕೆ ಅಪ್ರಾಪ್ತ ಬಾಲಕಿಯೇ ಎಂಬುದು ದೃಢಪಟ್ಟಿದೆ.
ಈ ಘಟನೆ ಸಂಬಂಧ ಪೊಲೀಸರು ಭೀಮಶಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೊತೆಗೆ, ಬಾಲಕಿಯನ್ನು ಕಂಡುಹಿಡಿಯಲು ಮಕ್ಕಳ ರಕ್ಷಣಾ ತಂಡವು ತೀವ್ರ ಪ್ರಯತ್ನ ನಡೆಸುತ್ತಿದೆ.