ಬೆಳಗಾವಿ, ನವೆಂಬರ್ 18: ಚಳಿಗಾಲದಿಂದ ಪಾರಾಗಲು ಕೋಣೆಯೊಳಗೆ ಇದ್ದಿಲು ಬೆಂಕಿ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರಲ್ಲಿ ಮೂವರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೇಳಗಾವಿಯ ಅಮನ್‌ನಗರದಲ್ಲಿ ನಡೆದಿದೆ. ಒಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತಪಟ್ಟವರಲ್ಲಿ ರಿಹಾನ್ ಮತ್ತೆ (22), ಮೋಹಿನ್ ನಾಲಬಂದ (23), ಮತ್ತು ಸರ್ಫರಾಜ್ ಹರಪ್ಪನಹಳ್ಳಿ (22) ಎಂಬುವವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಶಾಹನಾವಾಜ್ (19) ಎಂಬ ನಾಲ್ಕನೆಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ಕಾರ್ಯಕ್ರಮವೊಂದಕ್ಕೆ ತೆರಳಿ ಮರಳಿದ್ದ ನಾಲ್ವರು ಸ್ನೇಹಿತರು ತಮ್ಮ ಬಾಡಿಗೆ ಮನೆಯ ಕೋಣೆಯಲ್ಲಿ ಒಟ್ಟಿಗೆ ಮಲಗಿದ್ದರು. ರಾತ್ರಿ ವೇಳೆ ಇನ್ನಷ್ಟು ಚಳಿ ಹೆಚ್ಚಾಗಿದ್ದು, ಬೆಚ್ಚಗಿರಲು ಅವರು ಕೋಣೆಯ ಮಧ್ಯೆ ಇದ್ದಿಲಿನ ಬೆಂಕಿ ಹಚ್ಚಿದ್ದರು. ಜೊತೆಗೆ ಚಳಿ ತಡೆಯಲು ಬಾಗಿಲು-ಕಿಟಕಿಗಳನ್ನು ಮುಚ್ಚಿದ್ದಾರೆ.
ಸುಸ್ತಾಗಿ ಮನೆಗೆ ಬಂದಿದ್ದ ಯುವಕರು ತಕ್ಷಣವೇ ನಿದ್ರೆಗೆ ಜಾರಿದ್ದಾರೆ. ಆದರೆ ನಿದ್ರೆಯಲ್ಲಿರುವಾಗಲೇ ಇದ್ದಿಲಿನ ಬೆಂಕಿ ಉರಿಯದೇ ಹೊಗೆ ತುಂಬಿಕೊಂಡಿದೆ. ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯುವಕರು ಉಸಿರಾಟದ ತೊಂದರೆಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ತೆರಳಿ ಪರಿಶೀಲನೆ ನಡೆಸಿದರು. ಪ್ರದೇಶದ ಶಾಸಕ ಆಸೀಫ್ ಸೇಠ್ (ಅಸೀಫ್ ಸೇಠ್) ಸಹ ಆಗಮಿಸಿ ಘಟನಾ ಸ್ಥಳವನ್ನು ವೀಕ್ಷಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೂವರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸರು ಇದ್ದಿಲಿನ ತೊಟ್ಟಿಯಲ್ಲಿದ್ದ ಬೂದಿ ಮತ್ತು ಉಳಿದ ಭಸ್ಮದ ಮಾದರಿಗಳನ್ನು ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ.





