ಬೆಳಗಾವಿ: ಬೆಳಗಾವಿ ತಾಲೂಕಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕಳೆದ ತಿಂಗಳು ನಡೆದಿದ್ದ 31 ಕೃಷ್ಣಮೃಗಗಳ ದಿಢೀರ್ ಸಾವಿನ ಮರ್ಮ ಇದೀಗ ಬಯಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ತಜ್ಞ ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮುಖ್ಯ ಕಾರಣವಾಗಿ ಹೆಮರೇಜಿಕ್ ಸೆಪ್ಟಿಸೀಮಿಯಾ (Hemorrhagic Septicemia – HS) ಎಂಬ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಸೋಂಕು ದೃಢಪಟ್ಟಿದೆ.
ಅಕ್ಟೋಬರ್ 13ರಿಂದ 16ರವರೆಗೆ ಕೇವಲ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 31 ಕೃಷ್ಣಮೃಗಗಳು ಒಂದೊಂದೇ ಸಾಯತೊಡಗಿದ್ದವು. ಈ ಆತಂಕಕಾರಿ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಮೃಗಾಲಯದ ಸಿಬ್ಬಂದಿ ತಕ್ಷಣವೇ ಬನ್ನೇರುಘಟ್ಟದ ಪಶುವೈದ್ಯಕೀಯ ತಜ್ಞರನ್ನು ಕರೆಸಿದ್ದರು. ವೈರಾಣು ತಜ್ಞ ಡಾ. ಚಂದ್ರಶೇಖರ್ ನೇತೃತ್ವದ ತಂಡ ಮೃತ ಪ್ರಾಣಿಗಳ ಮೇಲೆ ಸಂಪೂರ್ಣ ಮರಣೋತ್ತರ ಪರೀಕ್ಷೆ ನಡೆಸಿ, ಅಂತಿಮ ವರದಿಯನ್ನು ಮೃಗಾಲಯ ಆಡಳಿತಕ್ಕೆ ಸಲ್ಲಿಸಿದೆ.
ಪಾಶ್ಚುರೆಲ್ಲಾ ಮಲ್ಟೋಸಿಡಾ (Pasteurella multocida) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಹೆಮರೇಜಿಕ್ ಸೆಪ್ಟಿಸೀಮಿಯಾ ರೋಗವೇ ಮುಖ್ಯ ಕಾರಣ. ಈ ರೋಗವು ಜಿಂಕೆ ವರ್ಗದ ಪ್ರಾಣಿಗಳಿಗೆ ಅತ್ಯಂತ ಮಾರಕವಾಗಿದ್ದು, ಒಮ್ಮೆ ಸೋಂಕು ಹರಡಿದರೆ ಕೆಲವೇ ಗಂಟೆಗಳಲ್ಲಿ ಪ್ರಾಣ ಹೋಗುವ ಸಾಧ್ಯತೆ ಇದೆ. ಇದರ ಜೊತೆಗೆ ಆ ದಿನಗಳಲ್ಲಿ ಆಕಸ್ಮಿಕವಾಗಿ ತಾಪಮಾನದಲ್ಲಿ ಭಾರೀ ಕುಸಿತ (ಹಠಾತ್ ಚಳಿ), ಮಳೆ ಮತ್ತು ಪ್ರಾಣಿಗಳಲ್ಲಾದ ಒತ್ತಡ (stress) ಕೂಡ ಸಾವಿನ ತೀವ್ರತೆ ಹೆಚ್ಚಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
HS ಸೋಂಕು ದೃಢಪಟ್ಟಿದು, ತಾಪಮಾನದ ಏರಿಳಿತ ಮತ್ತು ಒತ್ತಡ ಈ ರೋಗದ ಪ್ರಕೋಪವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ಮೃಗಾಲಯದ ಸಹಾಯಕ ವನ ಸಂರಕ್ಷಣಾಧಿಕಾರಿ (ACF) ನಾಗರಾಜ್ ಬಾಳೆಹೊಸೂರ್ ಅವರು ಮಾಧ್ಯಮಗಳಿಗೆ ತಿಳಿಸಿದೆ.
ಈಗ ಉಳಿದಿರುವ 7 ಕೃಷ್ಣಮೃಗಗಳ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಅವುಗಳಿಗೆ ತೀವ್ರ ನಿಗಾ, ಆ್ಯಂಟಿಬಯಾಟಿಕ್ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸೋಂಕು ಇತರ ಪ್ರಾಣಿಗಳಿಗೆ ಹರಡದಂತೆ ಮೃಗಾಲಯದಲ್ಲಿ ತುರ್ತು ಪ್ರೋಟೋಕಾಲ್ ಜಾರಿಗೊಳಿಸಲಾಗಿದೆ. ಹುಲಿ, ಸಿಂಹ, ಚಿರತೆ, ಕಾಡುಕತ್ತೆ, ಕರಡಿ, ವಿವಿಧ ಜಿಂಕೆ ಪ್ರಬೇಧಗಳಿಗೆ ಪ್ರತ್ಯೇಕ ನಿಗಾ ವಹಿಸಲಾಗುತ್ತಿದೆ.
HS ರೋಗವು ಮಣ್ಣು, ನೀರು, ಗಾಳಿಯ ಮೂಲಕವೂ ಹರಡಬಹುದು. ಆದ್ದರಿಂದ ಮೃಗಾಲಯದ ಸಂಪೂರ್ಣ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಎಲ್ಲಾ ಸಿಬ್ಬಂದಿಗೆ ಬಯೋ-ಸೆಕ್ಯುರಿಟಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಭವಿಷ್ಯದಲ್ಲಿ ಈ ರೋಗದಿಂದ ರಕ್ಷಣೆಗಾಗಿ ಕೃಷ್ಣಮೃಗಗಳಿಗೆ HS ಲಸಿಕೆ ನೀಡುವ ಯೋಜನೆಯೂ ಚರ್ಚೆಯಲ್ಲಿದೆ.





