ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರದ ರೈಲ್ವೆ ಬ್ರಿಡ್ಜ್ ಬಳಿ ಅನುಮಾನಾಸ್ಪದ ಸೂಟ್‌ಕೇಸ್‌ವೊಂದರಲ್ಲಿ ಸುಮಾರು 10 ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಕರ್ನಾಟಕ-ತಮಿಳುನಾಡು ಗಡಿಯ ಹೊಸೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ರೈಲ್ವೆ ಸೇತುವೆ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳೀಯರು ಶಂಕಿತ ಸೂಟ್‌ಕೇಸ್ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸೂಟ್‌ಕೇಸ್ ತೆರೆದಾಗ ಬಾಲಕಿಯ ಶವ ಕಂಡುಬಂದಿದೆ.
ಪೊಲೀಸರು ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆಯಲಾಗಿದೆ ಎಂದು ಶಂಕಿಸಿದ್ದಾರೆ. ಬಾಲಕಿಯನ್ನು ಕೊಲೆಗೈದ ಬಳಿಕ ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟು ಇಲ್ಲಿ ಎಸೆದಿರಬಹುದು ಎಂಬ ಶಂಕೆ ಇದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಬಾಲಕಿಯ ಗುರುತು ಪತ್ತೆಗಾಗಿ ಆರಂಭಿಕ ಕಾರ್ಯ ಆರಂಭವಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಬಾಲಕಿಯ ವಯಸ್ಸು ಮತ್ತು ಉಡುಗೆ ಆಧಾರದ ಮೇಲೆ ಗುರುತಿನ ಕೆಲಸ ನಡೆಯುತ್ತಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯ ರೈಲ್ವೆ ಹಳಿಯ ಬಳಿ ಶವವೊಂದು ಪತ್ತೆಯಾಗಿತ್ತು. ಇದು ತಮಿಳುನಾಡಿನಲ್ಲಿ ಕೊಲೆಯಾಗಿ ಕರ್ನಾಟಕದ ಗಡಿಯಲ್ಲಿ ಎಸೆಯಲ್ಪಟ್ಟಿರಬಹುದೆಂದು ಶಂಕಿಸಲಾಗಿದೆ.