ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಗುಡುಗು, ಮಿಂಚು, ಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡು, ರಸ್ತೆಗಳು ನದಿಗಳಂತಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆಗೀಡಾದ್ದಾರೆ. ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ, ಜನರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ಪರಿಸ್ಥಿತಿ ಉಂಟಾಗಿದೆ.
ಮಳೆಯ ಆರಂಭ ಮತ್ತು ಪರಿಣಾಮ:
ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ದಟ್ಟ ಮೋಡಗಳು ಕವಿದಿದ್ದು, ಗುಡುಗು-ಮಿಂಚಿನೊಂದಿಗೆ ಭಾರೀ ಗಾಳಿಯಿಂದ ಕೂಡಿ ಧಾರಾಕಾರ ಮಳೆ ಆರಂಭವಾಯಿತು. ಕೆಲವು ಕಡೆ ಆಲಿಕಲ್ಲು ಮಳೆಯೂ ಸುರಿದಿದ್ದು, ಕಲ್ಯಾಣ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಜನರು ಆಲಿಕಲ್ಲುಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಮಳೆ ಕೆಲವೇ ಕ್ಷಣಗಳ ಕಾಲ ತೀವ್ರವಾಗಿದ್ದರೂ, ರಾತ್ರಿ 9:30ರ ಸುಮಾರಿಗೆ ಮತ್ತೆ ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯಿತು.
ಎಲ್ಲೆಲ್ಲಿ ಮಳೆ
ಮೆಜೆಸ್ಟಿಕ್, ಗಾಂಧಿನಗರ, ಎಂಜಿ ರಸ್ತೆ, ಇಂದಿರಾನಗರ, ರಾಜಾಜಿನಗರ, ಯಶವಂತಪುರ, ಬನಶಂಕರಿ, ಜಯನಗರ, ಹೆಬ್ಬಾಳ, ನಾಗವಾರ, ಮಾನ್ಯತಾ ಟೆಕ್ ಪಾರ್ಕ್, ಮಲ್ಲೇಶ್ವರ, ಕೆಂಗೇರಿ, ಶಾಂತಿನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡವು. ನಾಗವಾರ, ಹೆಬ್ಬಾಳ ಮುಖ್ಯ ರಸ್ತೆ, ಮಾರತ್‌ಹಳ್ಳಿಯಿಂದ ಕುಂದಲಹಳ್ಳಿ, ಆಡುಗೋಡಿಯಿಂದ ಆನೆಪಾಳ್ಯದವರೆಗಿನ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ಸಾಯಿ ಲೇಔಟ್‌ನ ಸಮಸ್ಯೆ ಮುಂದುವರಿಕೆ
ನಗರದ ಸಾಯಿ ಲೇಔಟ್‌ನ ಜನರಿಗೆ ಮಳೆಯ ಸಮಸ್ಯೆ ಹೊಸದೇನಲ್ಲ. ಪ್ರತಿ ವರ್ಷವೂ ಇದೇ ಸ್ಥಿತಿ ಮರುಕಳಿಸುತ್ತಿದೆ. ಈ ಬಾರಿಯೂ ರಸ್ತೆಗಳಲ್ಲಿ ಒಂದು ಅಡಿಗೂ ಅಧಿಕ ನೀರು ನಿಂತು, ಜನರ ಓಡಾಟಕ್ಕೆ ಕಷ್ಟವಾಯಿತು. ಜೆಸಿಬಿ ಯಂತ್ರ ಬಳಸಿ ನೀರನ್ನು ಹರಿಸುವ ಪ್ರಯತ್ನಸಿದರು.
ಬಿಎಂಟಿಸಿ ಬಸ್‌ನಲ್ಲಿ ನೀರಿನ ಕಾಟ:
ನಾಗವಾರ ಮತ್ತು ಹೆಬ್ಬಾಳದಲ್ಲಿ ರಸ್ತೆಯಲ್ಲಿ ನಿಂತ ನೀರಿನಲ್ಲಿ ಬಿಎಂಟಿಸಿ ಬಸ್ ಸಂಚರಿಸಿದಾಗ, ಬಸ್ ಒಳಗೆ ನೀರು ನುಗ್ಗಿತು. ಪ್ರಯಾಣಿಕರು ಕಾಲುಗಳನ್ನು ಎತ್ತಿಕೊಂಡು ಕುಳಿತುಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಯಿತು.
ಧರೆಗುರುಳಿದ ಮರಗಳು:
ಮಳೆ ಗಾಳಿಯ ತೀವ್ರತೆಗೆ ನಗರದಾದ್ಯಂತ 30ಕ್ಕೂ ಅಧಿಕ ಮರಗಳು ಮತ್ತು 100ಕ್ಕೂ ಹೆಚ್ಚು ಕೊಂಬೆಗಳು ಧರೆಗುರುಳಿದವು. ಕುಮಾರಸ್ವಾಮಿ ಲೇಔಟ್‌ನಲ್ಲಿ ಕಾರಿನ ಮೇಲೆ ಮರ ಬಿದ್ದರೂ ಯಾವುದೇ ಜೀವಹಾನಿಯಾಗಲಿಲ್ಲ. ಇಂದಿರಾನಗರದಲ್ಲಿ 7 ಮರಗಳು, ರೇಸ್‌ಕೋರ್ಸ್ ರಸ್ತೆ, ಕಲ್ಯಾಣನಗರ, ಬಿನ್ನಿಪೇಟೆ, ಮಲ್ಲೇಶ್ವರದಲ್ಲಿ ಮರಗಳು ಕುಸಿದು ಬಿದ್ದಿವೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಮಂಗಳವಾರ ರಾತ್ರಿ 10 ಗಂಟೆಯ ವೇಳೆಗೆ ಸರಾಸರಿ 14 ಮಿ.ಮೀ ಮಳೆಯಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 4.7 ಸೆ.ಮೀ, ಬಾಣಸವಾಡಿಯಲ್ಲಿ 3.8 ಸೆ.ಮೀ, ಕೊಡಿಗೇಹಳ್ಳಿಯಲ್ಲಿ 2.9 ಸೆ.ಮೀ ಮಳೆಯಾಯಿತು. ಬುಧವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನ ಜನರು ಮಳೆಯಿಂದ ತಾತ್ಕಾಲಿಕವಾಗಿ ತಂಪಾದರೂ, ರಸ್ತೆಗಳ ಜಲಾವೃತ ಸ್ಥಿತಿ ಮತ್ತು ಮರಗಳ ಕುಸಿತದಿಂದ ತೊಂದರೆಗೀಡಾಗಿದ್ದಾರೆ. ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸದಿದ್ದರೆ, ಇಂತಹ ಸಮಸ್ಯೆಗಳು ಮುಂದುವರಿಯುವ ಆತಂಕವಿದೆ.