ಬೆಂಗಳೂರು, ಡಿಸೆಂಬರ್ 15: ಕರ್ನಾಟಕದಲ್ಲಿ ಶೀತ ಗಾಳಿಯ ಆರ್ಭಟ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೈಕೊರೆಯುವ ಚಳಿ ಜನಜೀವನವನ್ನು ಕಂಗೆಡಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಶೀತದ ಅಲೆಗಳು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಬಾಗಲಕೋಟೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆಗೆ ಗದಗ, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ ತಾಪಮಾನ 14–15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹೆಚ್‌ಎಎಲ್ ವ್ಯಾಪ್ತಿಯಲ್ಲಿ 13 ಡಿಗ್ರಿ ಸೆಲ್ಸಿಯಸ್ ತನಕ ಇಳಿಕೆ ಕಂಡಿದೆ. ಲಾಲ್‌ಬಾಗ್ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಶೇಕಡಾ 50ರಷ್ಟು ಕುಸಿದಿದೆ. ಡಿಸೆಂಬರ್ 17ರಿಂದ ಚಳಿಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ ಅಲ್ಲಿಯವರೆಗೆ ಮಕ್ಕಳು ಮತ್ತು ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.
ರಾಜ್ಯದಾದ್ಯಂತ ಕನಿಷ್ಠ ತಾಪಮಾನಗಳು ಇಳಿಕೆ ಕಂಡಿವೆ. ನಿನ್ನೆಯ ಹವಾಮಾನ ವರದಿಯ ಪ್ರಕಾರ, ಬಿದರಿನಲ್ಲಿ ಅತಿ ಕಡಿಮೆ 7.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತ್ಯಂತ ಕಡಿಮೆ ತಾಪಮಾನವಾಗಿದೆ. ಹೊನ್ನಾವರದಲ್ಲಿ 19.13 ಡಿಗ್ರಿ, ಬೆಂಗಳೂರು ಎಚ್‌ಎಎಲ್‌ನಲ್ಲಿ 13.4 ಡಿಗ್ರಿ, ನಗರದಲ್ಲಿ 14.5 ಡಿಗ್ರಿ, ಕೆಎಐಎಲ್ ಏಪಿಯಲ್ಲಿ 12.9 ಡಿಗ್ರಿ, ಹಾಸನದಲ್ಲಿ 8.7 ಡಿಗ್ರಿ, ಆಗುಂಬೆಯಲ್ಲಿ 9.3 ಡಿಗ್ರಿ, ಧಾರವಾಡದಲ್ಲಿ 9.5 ಡಿಗ್ರಿ, ವಿಜಯಪುರದಲ್ಲಿ 10 ಡಿಗ್ರಿ ದಾಖಲಾಗಿದೆ. ಈ ತಾಪಮಾನಗಳು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಶೀತ ಗಾಳಿಯ ಪ್ರಭಾವ ಹೆಚ್ಚು ಕಂಡುಬರುತ್ತಿದೆ.
ಮುಂದಿನ ನಾಲ್ಕು ದಿನಗಳ ಕಾಲ ಬೆಳಗ್ಗೆ 3ರಿಂದ 8 ಗಂಟೆಯವರೆಗೆ ತೀವ್ರ ಚಳಿ ಇರಲಿದ್ದು, ಸಿಲಿಕಾನ್ ಸಿಟಿಯಲ್ಲಿ ಶೀತ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮಕ್ಕಳು ಮತ್ತು ಹಿರಿಯರ ಆರೈಕೆಗೆ ಒತ್ತು ನೀಡಿದೆ. ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಶೇಕಡಾ 10ರಿಂದ 15ರಷ್ಟು ಹೆಚ್ಚಾಗುವ ಆತಂಕವಿದ್ದು, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಇದು ಉಲ್ಬಣಗೊಳ್ಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಳಗಿನ ವಾಕ್ ತಪ್ಪಿಸಿ, ಸಂಜೆಯ ವಾಕಿಂಗ್ ಅಥವಾ ಒಳಾಂಗಣ ವ್ಯಾಯಾಮವನ್ನು ಆಯ್ಕೆಮಾಡುವಂತೆ ಸಲಹೆ ನೀಡಿದ್ದಾರೆ. ಜೊತೆಗೆ ಬಜ್ಜಿ, ಬೋಂಡಾ ಮುಂತಾದ ಕರಿದ ಆಹಾರಗಳನ್ನು ತಪ್ಪಿಸಿ, ಬಿಸಿ ಸೂಪ್, ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವಂತೆ ತಜ್ಞರು ತಿಳಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಒಣ ಹವೆ ಮುಂದುವರಿದಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಯಾವುದೇ ಮಳೆಯ ನಿರೀಕ್ಷೆಯಿಲ್ಲ, ಒಣಹವೆ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಒಣ ಹವೆಯೇ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಮುಂದಿನ ದಿನಗಳಲ್ಲೂ ಅದೇ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕದಲ್ಲಿ ಬೆಳೆಗಳು ಶೀತದಿಂದ ಹಾನಿಗೊಳಗಾಗುವ ಆತಂಕವಿದ್ದು, ರೈತರು ಎಚ್ಚರಿಕೆ ವಹಿಸಬೇಕು. ಅಲ್ಲದೆ, ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಮಂಜು ಹೆಚ್ಚಾಗಿ ವಾಹನ ಚಾಲಕರಿಗೆ ಸವಾಲು ಎದುರಿಸುತ್ತಿದೆ. ಈ ಚಳಿಗಾಲದಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದಿರಬೇಕು. ಬೆಚ್ಚನೆಯ ಉಡುಪು, ಬಿಸಿ ಆಹಾರ ಮತ್ತು ಒಳಾಂಗಣ ಚಟುವಟಿಕೆಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.





