ಬೆಂಗಳೂರು: ಸಾಮಾನ್ಯವಾಗಿ ಇಡ್ಲಿ ಎಂದರೆ ಅಗ್ಗದ, ಪೌಷ್ಟಿಕ ಮತ್ತು ಎಲ್ಲ ವರ್ಗದ ಜನರಿಗೂ ಕೈಗೆಟುಕುವ ದಕ್ಷಿಣ ಭಾರತದ ಪ್ರಸಿದ್ಧ ಉಪಾಹಾರ. ರಸ್ತೆ ಬದಿ ಟೀ ಅಂಗಡಿಗಳಲ್ಲಿ ₹30–₹40ಕ್ಕೆ ಸಿಗುವ ಇಡ್ಲಿ, ಉತ್ತಮ ಹೋಟೆಲ್‌ಗಳಲ್ಲಿ ₹80–₹100ರೊಳಗೆ ದೊರೆಯುತ್ತದೆ. ಆದರೆ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ)ದಲ್ಲಿ ಇಡ್ಲಿ ಬೆಲೆ ಕೇಳಿದರೆ ಅಚ್ಚರಿ ಪಡುವುದು ಖಚಿತ.
ಪ್ರಖ್ಯಾತ ರಾಮೇಶ್ವರಂ ಕೆಫೆಯ ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ ಒಂದು ಪ್ಲೇಟ್ ಘೀ ಪೊಡಿ ಇಡ್ಲಿಗೆ ಟ್ಯಾಕ್ಸ್ ಸೇರಿ ₹315 ವಿಧಿಸಲಾಗಿದೆ.. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಏನಿದು ವಿವಾದ?
ರೆಡ್ಡಿಟ್‌ನಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡ ಬಿಲ್ ವೈರಲ್ ಆದ ನಂತರ ಈ ವಿಷಯ ಬಹಿರಂಗವಾಯಿತು. ನಗರದ ಇತರ ಭಾಗಗಳಲ್ಲಿ ಸುಮಾರು ₹90ರೊಳಗೆ ಸಿಗುವ ಅದೇ ಘೀ ಪೊಡಿ ಇಡ್ಲಿ, ಏರ್‌ಪೋರ್ಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚು ದರದಲ್ಲಿ ಮಾರಾಟವಾಗುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. “ಏರ್‌ಪೋರ್ಟ್ ಒಳಗೆ ಹೋದ ಕೂಡಲೇ ಇಡ್ಲಿ ಚಿನ್ನದ ಬೆಲೆ ಆಗುತ್ತದೆಯೇ?” ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ…
ಇಡ್ಲಿ ಎಂದರೆ ಎಲ್ಲ ವರ್ಗದ ಜನರಿಗೂ ಪರಿಚಿತವಾದ, ಸುಲಭವಾಗಿ ದೊರೆಯುವ ಆಹಾರ. ಆದರೆ ವಿಮಾನ ನಿಲ್ದಾಣದಂತಹ ಸ್ಥಳದಲ್ಲಿ ಅದರ ಬೆಲೆ ₹300 ದಾಟಿರುವುದು ಸಾಮಾನ್ಯ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ.
ಜಾಲತಾಣದಲ್ಲಿ ಪರ-ವಿರೋಧದ ಅಲೆ
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಎರಡು ಗುಂಪುಗಳಾಗಿ ವಿಭಜಿಸಿದೆ.
“ಇದು ಮೋಸ” ಎನ್ನುವವರ ವಾದ:
ಹಸಿವು ಎಲ್ಲರಿಗೂ ಒಂದೇ. ವಿಮಾನ ನಿಲ್ದಾಣಕ್ಕೆ ಹೋಗುವವರೆಲ್ಲರೂ ಶ್ರೀಮಂತರಲ್ಲ. ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ಮಧ್ಯಮ ವರ್ಗದ ಕುಟುಂಬಗಳು ಸಹ ಪ್ರಯಾಣಿಸುತ್ತಾರೆ. ಸಾಮಾನ್ಯ ಉಪಾಹಾರದ ಮೇಲೆ ಇಷ್ಟು ದೊಡ್ಡ ಮಟ್ಟದ ಬೆಲೆ ಏರಿಕೆ ಮಾಡುವುದು ಅನ್ಯಾಯ. ಅಧಿಕಾರಿಗಳ ನಿಯಂತ್ರಣವಿಲ್ಲವೇ? ಗ್ರಾಹಕರ ರಕ್ಷಣೆ ಎಲ್ಲಿದೆ? ಎಂಬುದು ಇವರ ಪ್ರಶ್ನೆಯಾಗಿದೆ
“ಅನಿವಾರ್ಯ ವೆಚ್ಚ” ಎನ್ನುವವರ ವಾದ:
ಏರ್‌ಪೋರ್ಟ್‌ನಲ್ಲಿ ಮಳಿಗೆಗಳ ಬಾಡಿಗೆ ಲಕ್ಷಾಂತರ ರೂಪಾಯಿ. 24/7 ಸೇವೆ ನೀಡಬೇಕು. ಸಾಮಗ್ರಿಗಳ ಸಾಗಾಟಕ್ಕೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ. ಸಿಬ್ಬಂದಿಗೆ ಹೆಚ್ಚುವರಿ ವೇತನ, ನಿರ್ವಹಣಾ ವೆಚ್ಚ, ಪರವಾನಗಿ ಶುಲ್ಕ ಇವೆಲ್ಲ ಸೇರಿ ಬೆಲೆ ಹೆಚ್ಚುವುದು ಸಹಜ ಎಂದು ಉದ್ಯಮದ ಪರ ಇರುವವರು ವಾದಿಸುತ್ತಿದ್ದಾರೆ. “ಏರ್‌ಪೋರ್ಟ್ ಬೆಲೆಗಳನ್ನು ನಗರದ ಸಾಮಾನ್ಯ ಹೋಟೆಲ್‌ಗಳೊಂದಿಗೆ ಹೋಲಿಸುವುದು ಸರಿಯಲ್ಲ” ಎಂಬುದು ಅವರ ಅಭಿಪ್ರಾಯ.
ಇಡ್ಲಿ ದಕ್ಷಿಣ ಭಾರತದ ಮನೆಮಾತಾದ ಆಹಾರ. ರವಾ ಇಡ್ಲಿ, ರಾಗಿ ಇಡ್ಲಿ, ಓಟ್ಸ್ ಇಡ್ಲಿ, ಮಲ್ಲಿಗೆ ಇಡ್ಲಿ ನೂರಾರು ವೈವಿಧ್ಯತೆಗಳಿವೆ. ಆರೋಗ್ಯಕರ, ಎಣ್ಣೆ ಕಡಿಮೆ, ಜೀರ್ಣಕ್ಕೆ ಸುಲಭ ಇವೆಲ್ಲ ಕಾರಣಗಳಿಂದ ಇಡ್ಲಿ “ಸೂಪರ್ ಬ್ರೇಕ್‌ಫಾಸ್ಟ್” ಎಂದೇ ಪರಿಗಣಿಸಲಾಗುತ್ತದೆ. ಆದರೆ ಅದರ ಮೂಲಭೂತ ಸರಳತೆ ಮತ್ತು ಅಗ್ಗದ ದರವೇ ಅದರ ಜನಪ್ರಿಯತೆಗೆ ಕಾರಣ.
ಇಂತಹ ತಿಂಡಿ ವಿಮಾನ ನಿಲ್ದಾಣದಲ್ಲಿ ₹300 ಮೀರಿದಾಗ, ಅದು ಕೇವಲ ಆಹಾರವಲ್ಲ ಐಷಾರಾಮಿ ಉತ್ಪನ್ನದಂತೆ ಕಾಣುತ್ತದೆ. “ವಿಮಾನ ಟಿಕೆಟ್ ದುಬಾರಿ ಇದ್ದರೂ ಸರಿ, ಊಟ ಕನಿಷ್ಠ ಕೈಗೆಟುಕುವಂತಿರಬೇಕು” ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ವಿಮಾನದಲ್ಲಿ ಹಾರುವವರಿಗೆ ₹315 ದೊಡ್ಡ ಮೊತ್ತವಲ್ಲ ಎನ್ನುವ ಒಂದು ವರ್ಗವಿದ್ದರೆ, ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದು ಹಗಲು ದರೋಡೆ ಎಂಬ ಮತ್ತೊಂದು ವರ್ಗವೂ ಇದೆ. ಇಡ್ಲಿ ಬೆಲೆ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ.





