ಬೆಂಗಳೂರು: ಲೈಂಗಿಕ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ ಅವರಿಂದ ಒಟ್ಟು 48 ಲಕ್ಷ ರೂಪಾಯಿ ವಂಚಿಸಿ, ಜೊತೆಗೆ ತಪ್ಪು ಚಿಕಿತ್ಸೆಯಿಂದಾಗಿ ಅವರ ಒಂದು ಕಿಡ್ನಿಯನ್ನೂ ಕಸಿದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ವಿಜಯ್ ಗುರೂಜಿ ಎಂಬಾತನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ತೇಜಸ್ ಅವರು ಕೆಂಗೇರಿಯ ಖ್ಯಾತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇತರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವ ದಾರಿಯಲ್ಲಿ ರಸ್ತೆ ಬದಿಯ ಒಂದು ಸಣ್ಣ ಟೆಂಟ್‌ನಲ್ಲಿ “ಲೈಂಗಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಆಯುರ್ವೇದ ಚಿಕಿತ್ಸೆ” ಎಂಬ ಬೋರ್ಡ್ ಕಂಡು ಅಲ್ಲಿಗೆ ಹೋದರು. ಟೆಂಟ್‌ನಲ್ಲಿ ಕುಳಿತಿದ್ದ ವ್ಯಕ್ತಿ “ನನ್ನ ಗುರುಗಳಾದ ವಿಜಯ್ ಗುರೂಜಿ ಇದಕ್ಕೆ ಪರಿಹಾರ ಕೊಡುತ್ತಾರೆ” ಎಂದು ಭರವಸೆ ನೀಡಿದನು.
ಅಲ್ಲಿ “ದೇವರಾಜ್ ಬೂಟಿ” ಮತ್ತು “ಭವಾನ್ ಬೂಟಿ ತೈಲ” ಎಂಬ ಔಷಧಗಳನ್ನು ಸೂಚಿಸಲಾಯಿತು. ಒಂದು ಗ್ರಾಂ ದೇವರಾಜ್ ಬೂಟಿಗೆ 1.6 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು. ಇದನ್ನು ಯಶವಂತಪುರದಲ್ಲಿರುವ “ವಿಜಯಲಕ್ಷ್ಮಿ ಆಯುರ್ವೇದಿಕ್ ಶಾಪ್”ನಲ್ಲಿ ಮಾತ್ರ ಖರೀದಿಸಬೇಕು, ಯಾರ ಜೊತೆಗೂ ಬರಬಾರದು, ಆನ್‌ಲೈನ್ ಪೇಮೆಂಟ್ ಮಾಡಬಾರದು, ನೇರವಾಗಿ ನಗದೇ ಕೊಡಬೇಕು ಎಂಬ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಲಾಯಿತು.
ತೇಜಸ್ ಅವರು ಮೊದಲ ಹಂತದಲ್ಲಿ ಸುಮಾರು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಲವು ಬಾರಿ ಔಷಧ ಖರೀದಿಸಿದರು. ಆದರೆ ಯಾವುದೇ ಸುಧಾರಣೆ ಕಂಡಿಲ್ಲ. ಹೆಚ್ಚಿನ ಔಷಧ ಕೊಡಿಸಿಕೊಳ್ಳಲು ಹಣದ ಕೊರತೆಯಾದಾಗ ಹೆಚ್.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲ ಪಡೆದು 20 ಲಕ್ಷ ರೂಪಾಯಿ ತಂದು, 18 ಗ್ರಾಂ ಔಷಧ ಖರೀದಿಸಿದರು. ಒಟ್ಟಾರೆಯಾಗಿ 48 ಲಕ್ಷ ರೂಪಾಯಿ ಖರ್ಚಾ ಮಾಡಿದರೂ ಸಮಸ್ಯೆ ಗುಣವಾಗಲಿಲ್ಲ. ಮತ್ತೆ ಹೊಸದಾಗಿ ಆರೋಗ್ಯ ಸಮಸ್ಯೆ ಶುರುವಾಯಿತು.
ಕೊನೆಗೆ ರಕ್ತ ಪರೀಕ್ಷೆ ಮಾಡಿಸಿದಾಗ ಒಂದು ಕಿಡ್ನಿ ಪೂರ್ತಿಯಾಗಿ ಕೆಟ್ಟುಹೋಗಿರುವುದು ಪತ್ತೆಯಾಯಿತು. ತಪ್ಪಾದ ಔಷಧಗಳು ಮತ್ತು ಅನಧಿಕೃತ ಚಿಕಿತ್ಸೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಆ ಆಘಾತದಿಂದ ತೇಜಸ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದಿಕ್ ಶಾಪ್ ಮಾಲೀಕರ ವಿರುದ್ಧ ವಂಚನೆ, ವೈದ್ಯಕೀಯ ದುರ್ನಡತೆ ಮತ್ತು ಜೀವಕ್ಕೆ ಅಪಾಯ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆ ನಡೆಸಿ ವಿಜಯ್ ಗುರೂಜಿಯನ್ನ ಬಂಧಿಸಿದ್ದಾರೆ. ಈತ ಇದೇ ರೀತಿ ನಗರದ ಹಲವೆಡೆ ಟೆಂಟ್ ಹಾಕಿ, ಆಕರ್ಷಕ ಬೋರ್ಡ್‌ಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ವಿಜಯಲಕ್ಷ್ಮಿ ಶಾಪ್‌ನ ಮಾಲೀಕಿ ಇನ್ನೂ ತಲೆಮರೆಸಿಕೊಂಡಿದ್ದಾರೆ.





