ಬಳ್ಳಾರಿ: ಬಳ್ಳಾರಿ ನಗರದ ನಾಗಲಕೇರಿ ಬಳಿ ಇರುವ ಸುಪ್ರಸಿದ್ಧ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ ಮಾಂಸದ ಚೀಲ ಪತ್ತೆಯಾಗಿದೆ. ಈ ಘಟನೆ ಭಕ್ತರಲ್ಲಿ ಭಾರೀ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ದೇವಾಲಯದ ಆವರಣದಲ್ಲೇ ಇಂತಹ ಅಸಹ್ಯಕರ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆ ಎಂದಿನಂತೆ ಪೂಜೆಗಾಗಿ ದೇವಸ್ಥಾನ ತೆರೆಯಲು ಆಗಮಿಸಿದ ಅರ್ಚಕರಿಗೆ ಈ ಶಾಕ್ ಎದುರಾಗಿದೆ. ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಎದುರು, ಗರುಡಸ್ತಂಭದ ಬಳಿ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿದ ಮಾಂಸದ ಚೀಲ ಬಿದ್ದಿರುವುದನ್ನು ಕಂಡು ಅರ್ಚಕರು ಬೆಚ್ಚಿಬಿದ್ದಿದ್ದಾರೆ. ಮೊದಲಿಗೆ ಅನುಮಾನಗೊಂಡು ಹತ್ತಿರ ಹೋಗಿ ಪರಿಶೀಲಿಸಿದಾಗ ಅದು ಮಾಂಸವೆಂದು ದೃಢಪಟ್ಟಿದೆ.
ಪವಿತ್ರ ಸ್ಥಳದಲ್ಲೇ ಮಾಂಸ ಪತ್ತೆಯಾಗುತ್ತಿದ್ದಂತೆ ಅರ್ಚಕರು ತಕ್ಷಣ ಸ್ಥಳೀಯ ನಿವಾಸಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಜನರು ಗುಂಪುಗೂಡಿದ್ದು, ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಮಾಂಸದ ಚೀಲವನ್ನು ತೆರವುಗೊಳಿಸಿ, ಸ್ಥಳ ಪರಿಶೀಲನೆ ನಡೆಸಿದರು. ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಲು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮಾಂಸವನ್ನು ಯಾರು ತಂದಿಟ್ಟರು? ಯಾವ ಉದ್ದೇಶದಿಂದ ಈ ಕೃತ್ಯ ನಡೆದಿದೆ? ಎಂಬುದರ ಕುರಿತು ಪೊಲೀಸರು ಗಂಭೀರ ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಉದ್ದೇಶಪೂರ್ವಕ ಕಿಡಿಗೇಡಿಗಳ ಕೃತ್ಯವೋ ಅಥವಾ ಬೀದಿ ನಾಯಿಗಳು ಎಲ್ಲೋ ಇದ್ದ ಮಾಂಸದ ಚೀಲವನ್ನು ಎಳೆದುಕೊಂಡು ಬಂದು ದೇವಸ್ಥಾನದ ಆವರಣದಲ್ಲಿ ಬಿಟ್ಟಿರಬಹುದೋ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ದೇವಸ್ಥಾನದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಶಂಕಿತ ವ್ಯಕ್ತಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.
ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಚಕರು ಹಾಗೂ ಸ್ಥಳೀಯರಿಂದ ವಿವರ ಪಡೆದರು. ನಂತರ ಮಾತನಾಡಿದ ಅವರು, “ಪವಿತ್ರ ದೇಗುಲದ ಆವರಣದಲ್ಲಿ ಇಂತಹ ಅಸಹ್ಯ ಕೃತ್ಯ ನಡೆದಿರುವುದು ಖಂಡನೀಯ. ಇದು ಶಾಂತಿ ಕದಡುವ ಉದ್ದೇಶದಿಂದ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.





