ಬಾಗಲಕೋಟೆ: ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಪೂರ್ಣಿಮಾ ರಾಠೋಡ್ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಘಟನೆಯಿಂದ ಕುಟುಂಬ ಸದಸ್ಯರು ಆಸ್ಪತ್ರೆ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅರೆಬೆಂಚಿ ತಾಂಡದ ವಾಸಿಯಾಗಿದ್ದ ಪೂರ್ಣಿಮಾ ಅವರನ್ನು ಹೆರಿಗೆ ನೋವು ಉಂಟಾದ ಕಾರಣ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ಮಧ್ಯಾಹ್ನ 12.30 ಗಂಟೆಗೆ ಪೂರ್ಣಿಮಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆರಿಗೆ ನಂತರ ಅವರು ಆರಾಮವಾಗಿದ್ದರು. ಆದರೆ ಸಂಜೆ 7.00 ರಿಂದ 7.30 ಗಂಟೆಯ ಅವಧಿಯಲ್ಲಿ ಹಠತ್ತಾಗಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಸಿಜೇರಿಯನ್ ನಂತರ ಪೂರ್ಣಿಮಾ ಬಳಲುತ್ತಿದ್ದಳು. ಆ ಸಮಯದಲ್ಲಿ ವೈದ್ಯರು ಬಾರದೇ ನರ್ಸಗಳು ಮಾತ್ರ ಇಂಜೆಕ್ಷನ್ ಕೊಟ್ಟರು. ಇಂಜೆಕ್ಷನ್ ನಂತರ ಅವಳ ಸ್ಥಿತಿ ಹದಗೆಟ್ಟು ಪ್ರಾಣ ಬಿಟ್ಟಳು ಎಂದು ಕುಟುಂಬ ಸದಸ್ಯರು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಆರೋಪಿಸಿದ್ದಾರೆ.
ಬಾಣಂತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗಿತ್ತು. ಸಿಜೇರಿಯನ್ ನಂತರ ಸಂಜೆ ಏಕಾಏಕಿ ಅವರ ರಕ್ತದೊತ್ತಡ ಕುಸಿದು ಹೃದಯಾಘಾತವಾಯಿತು. ನಾವು ಬದುಕಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ದುರಾದೃಷ್ಟವಶಾತ್ ಅವರು ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೃತರ ನವಜಾತ ಶಿಶು ಆರೋಗ್ಯವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.