ಬಾಗಲಕೋಟೆ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಸಮೀಪದಲ್ಲಿ ಸಂಭವಿಸಿದ ಮಾರಕ ಅಗ್ನಿ ಅಪಘಾತದಲ್ಲಿ ಏಳು ಜನ ಗಾಯಗೊಂಡಿದ್ದಾರೆ.
ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ ಎದುರು ದೀಪ ಹಚ್ಚಲಾಗಿತ್ತು. ದೀಪದ ಬೆಂಕಿಯಿಂದ ಮನೆ ಎದುರಿಗೆ ಚೆಲ್ಲಿದ್ದ ಎಣ್ಣೆಗೆ ಬೆಂಕಿ ತಗುಲಿದೆ. ಇದರಿಂದ ಮನೆ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ತರುವಾಯ ಬೆಂಕಿ ಮನೆಗೆ ಹರಡಿದ್ದು, ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ.
ಈ ವೇಳೆ ತಪಶೆಟ್ಟಿ ಕುಟುಂಬದವರು ಮನೆಯಿಂದ ಗಹೊರಗೆ ಬಂದಿದ್ದಾರೆ ಆದರೆ ಮೇಲ್ಮಹಡಿಯಲ್ಲಿದ್ದ ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಗೊಂಡ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಕಲಾದಗಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮನೆಯ ಮಾಲಿಕ ರಾಜೇಂದ್ರ ತಪಶೆಟ್ಟಿ ಬೋರ್‌ವೆಲ್ ಕೆಲಸ ಮಾಡುತ್ತಿದ್ದವರಾಗಿದ್ದು, ಕೆಲಸಕ್ಕೆ ಬೇಕಾದ ಎಣ್ಣೆಯನ್ನು ಮನೆಯ ಎದುರು ಸಂಗ್ರಹಿಸಿದ್ದರು. ದೀಪದ ಜ್ವಾಲೆ ಈ ಎಣ್ಣೆಗೆ ತಗುಲಿದ್ದೇ ಅವಘಡಕ್ಕೆ ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.