ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿಯೊಬ್ಬರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 46ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿಗೆ ಬೇಲ್ ನೀಡಲಾಗಿದೆ.
ಇಂದು ಬೆಳಗ್ಗೆಯೇ ಪೊಲೀಸರು ಅರವಿಂದ್ ರೆಡ್ಡಿಯನ್ನು ಬಂಧಿಸಿದ್ದರು. ಆರೋಪಿ AVR ಗ್ರೂಪ್‌ನ ಸಂಸ್ಥಾಪಕ ಮತ್ತು ಚಲನಚಿತ್ರ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅರವಿಂದ್, ನಟಿಗೆ ಕಿರುಕುಳ ನೀಡಿದ್ದ ಆರೋಪದ ಮೇಲೆ ವಿಚಾರಣೆಗೆ ಒಳಪಡಿದ್ದರು. ನಂತರ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ, ನ್ಯಾಯಾಲಯವು ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ
ಈ ನಟಿ ಕನ್ನಡ ಚಿತ್ರರಂಗದಲ್ಲಿ 9ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದಾರೆ. 2021ರಲ್ಲಿ ಅರವಿಂದ್ ಮತ್ತು ನಟಿಯ ನಡುವೆ ಪರಿಚಯ ಬೆಳೆದಿತ್ತು. ಅರವಿಂದ್, ಕ್ರಿಕೆಟ್ ಟೂರ್ನಮೆಂಟ್‌ಗಳ ಸ್ಪಾನ್ಸರ್ ಆಗಿ ಖ್ಯಾತರಾಗಿದ್ದರು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್’ ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿಯನ್ನು ಆಹ್ವಾನಿಸಿದ್ದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಆರಂಭದಲ್ಲಿ ಅರವಿಂದ್ ಪ್ರೀತಿಯಿಂದ ನಡೆದುಕೊಂಡಿದ್ದರಂತೆ. ಆದರೆ, 2022ರ ಆಗಸ್ಟ್‌ನಲ್ಲಿ ಆತನ ಸಂಪರ್ಕ ಕಡಿದುಹೋಯಿತು. ನಟಿಗೆ ಇದರ ಕಾರಣ ತಿಳಿದಿರಲಿಲ್ಲ.
ಕೆಲವು ತಿಂಗಳುಗಳ ಬಳಿಕ ಅರವಿಂದ್ ಮತ್ತೆ ಸಂಪರ್ಕಕ್ಕೆ ಬಂದರು. ಆದರೆ, ಈ ಬಾರಿ ಆತನ ವರ್ತನೆ ಬದಲಾಗಿತ್ತು. ನಟಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಶುರುಮಾಡಿದ್ದರು. ಆತನ ಕುಡಿತದ ಚಟವನ್ನು ನಟಿ ಗಮನಿಸಿದ್ದರು. 2024ರಲ್ಲಿ ಅರವಿಂದ್ ನಟಿಗೆ ಕರೆ ಮಾಡಿ, “ನಿನ್ನನ್ನು ಮದುವೆಯಾಗುತ್ತೇನೆ” ಎಂದು ಹೇಳಿದ್ದರು. ಆದರೆ, ಇದು ಕೇವಲ ಬೆದರಿಕೆಯಾಗಿತ್ತು. ನಟಿಯ ದೂರಿನ ಪ್ರಕಾರ, ಅರವಿಂದ್ ಅವರನ್ನು ಮನೆಗೆ ಕರೆಸಿ ಮದುವೆಯ ಭರವಸೆ ನೀಡಿ ಹಿಂಸೆ ನೀಡಿದ್ದು, ದೈಹಿಕ ಕಿರುಕುಳ ನೀಡಿದ ಆರೋಪವಿದೆ.
ಈ ಕಿರುಕುಳಕ್ಕೆ ಬೇಸತ್ತ ನಟಿ, ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ, ಅರವಿಂದ್ ಮತ್ತೆ ಸಂಪರ್ಕಿಸಿ, ನೀಡಿದ್ದ ಉಡುಗೊರೆಗಳನ್ನು ವಾಪಸ್ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ, ಒಂದು ಕೋಟಿ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 2024ರರ ಜೂನ್ 14ರಂದು ನಟಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದರು. ಆಯೋಗದ ಮಧ್ಯಸ್ಥಿಕೆಯ ನಂತರ ಪೊಲೀಸರು ಕ್ರಮ ಕೈಗೊಂಡರು.
ಅರವಿಂದ್ ರೆಡ್ಡಿ ಸಿನಿಮಾ ಉದ್ಯಮದೊಂದಿಗೆ ನಂಟು ಹೊಂದಿದ್ದರು. ಚಲನಚಿತ್ರ ನಟ-ನಟಿಯರಿಗಾಗಿ ಹಲವು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದರು. ದುಬೈ, ಶ್ರೀಲಂಕಾ ಸೇರಿದಂತೆ ವಿದೇಶಗಳಲ್ಲಿ ನಡೆದ ಟೂರ್ನಮೆಂಟ್‌ಗಳ ಪ್ರಮುಖ ಸ್ಪಾನ್ಸರ್ ಆಗಿ AVR ಗ್ರೂಪ್ ಖ್ಯಾತಿ ಗಳಿಸಿತ್ತು.





