ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ (Anna Bhagya) ಯೋಜನೆಯ ಅಕ್ಕಿ ಅಕ್ರಮ ಸಾಗಾಟದ ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ಚರ್ಚೆ ನಡೆಯಿತು. ಈ ಅಕ್ರಮಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದರು. ಅಷ್ಟೇ ಅಲ್ಲದೆ, ಜನವರಿಯಿಂದ 5 ಕೆಜಿ ಅಕ್ಕಿಗೆ ಬದಲಾಗಿ ‘ಇಂದಿರಾ ಕಿಟ್’ ವಿತರಣೆ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಸಿ.ಟಿ. ರವಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ಅನ್ನಭಾಗ್ಯ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.
ಈ ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದು, ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಟೀಕೆ ಮಾಡಿದರು. ರಾಜ್ಯವ್ಯಾಪಿ ನಡೆಯುತ್ತಿರುವ ಈ ಅಕ್ರಮದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಮುನಿಯಪ್ಪ ಅವರು, ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟದ ಕುರಿತು ಸರ್ಕಾರಕ್ಕೆ ಮಾಹಿತಿ ಇದೆ ಎಂದು ಹೇಳಿದರು. 2025 ರಲ್ಲಿ ಈ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಮಾರು 485 ಕೇಸ್‌ಗಳನ್ನು ದಾಖಲಿಸಲಾಗಿದೆ. ಈ ಕಾರ್ಯಾಚರಣೆಗಳ ಮೂಲಕ 29,603 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಕೊಪ್ಪಳದಲ್ಲಿ ದಾಖಲಾದ ಪ್ರಕರಣವನ್ನು ಸಿಐಡಿಗೆ (CID) ವಹಿಸಲಾಗಿದೆ. ಬಾಗಲಕೋಟೆ ಕೇಸ್‌ನ ತನಿಖೆ ಪ್ರಗತಿಯಲ್ಲಿದೆ. ಅಕ್ರಮದ ಕುರಿತು ವರದಿ ಮಾಡಿದ್ದ ಒಬ್ಬ ಪತ್ರಕರ್ತನ ಕೊಲೆ ಕೂಡಾ ಆಗಿದೆ. ಈ ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿನ ಅಕ್ಕಿ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಅಕ್ರಮ ಅಕ್ಕಿ ಸಾಗಾಟಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಮುನಿಯಪ್ಪ ಘೋಷಿಸಿದರು.
ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಅಕ್ಕಿ ಅಕ್ರಮ ಸಾಗಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ 5 ಕೆಜಿ ಅಕ್ಕಿ ಬದಲಿಗೆ ಜನರಿಗೆ ‘ಇಂದಿರಾ ಕಿಟ್’ ವಿತರಣೆ ಮಾಡುವ ನಿರ್ಧಾರ ಮಾಡಲಾಗಿದೆ. ಈ ಕಿಟ್‌ನಲ್ಲಿ ಅಕ್ಕಿಯ ಜೊತೆಗೆ ಇತರೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಈ ‘ಇಂದಿರಾ ಕಿಟ್’ ವಿತರಣೆಯು ಜನವರಿಯಿಂದ ಆರಂಭಗೊಳ್ಳಲಿದೆ. ಇಂದಿರಾ ಕಿಟ್ ಕೊಟ್ಟಾಗ ಅಕ್ಕಿಯ ಅಕ್ರಮ ಸಾಗಾಟವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಜನರಿಗೆ ಪೌಷ್ಟಿಕ ಆಹಾರ ಸಿಗುವ ವ್ಯವಸ್ಥೆಯೂ ಆಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಈಗಾಗಲೇ ಇರುವ ಕಾನೂನಿನ ಅಡಿಯಲ್ಲೇ ಅಕ್ರಮ ತಡೆಗೆ ಕ್ರಮ ಕೈಗೊಳ್ಳುವುದರಿಂದ, ಪ್ರತ್ಯೇಕ ಎಸ್‌ಐಟಿ ರಚನೆಯ ಅವಶ್ಯಕತೆ ಇಲ್ಲ ಎಂದು ಅವರು ಸಿ.ಟಿ. ರವಿ ಅವರ ಬೇಡಿಕೆಯನ್ನು ತಳ್ಳಿಹಾಕಿದರು.
ಈ ಚರ್ಚೆಯ ನಡುವೆ, ಸಚಿವ ಪ್ರಿಯಾಂಕ್ ಖರ್ಗೆಯವರು ಮಧ್ಯ ಪ್ರವೇಶಿಸಿ, ಬಿಜೆಪಿಗೆ ತಿರುಗೇಟು ನೀಡಿದರು. ಯಾದಗಿರಿಯಲ್ಲಿ ನಡೆದ ಅಕ್ರಮದ ಕೇಸ್ ಸಿಐಡಿಗೆ ವಹಿಸಲಾಗಿದ್ದು, ಅದರಲ್ಲಿ A1, A2 ಯಾರು ಎಂದು ನೋಡಲಿ ಎಂದು ಸಿ.ಟಿ. ರವಿಗೆ ಟಾಂಗ್ ಕೊಟ್ಟರು.
ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಸಚಿವರು ಉತ್ತರ ಕೊಡಲು ಇರುವಾಗ ಬೇರೆಯವರು ಯಾಕೆ ಮಾತನಾಡಬೇಕು ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೆ ಮಾತು ಮುಂದುವರೆಸಿದ ಪ್ರಿಯಾಂಕ್ ಖರ್ಗೆ, ಯಾದಗಿರಿಯಲ್ಲಿ A1, A2, A3 ಆರೋಪಿಗಳು ಬಿಜೆಪಿಗರು ಮತ್ತು ಬಿಜೆಪಿ ಪದಾಧಿಕಾರಿಗಳೇ ಈ ಅಕ್ರಮ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು. ಇದರಿಂದ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಗದ್ದಲ ಮತ್ತು ಗಲಾಟೆ ಉಂಟಾಯಿತು. ಅನ್ನಭಾಗ್ಯ ಅಕ್ಕಿ ಅಕ್ರಮ ವಿಚಾರವು ಸದನದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಯಿತು.





