ಆಮ್ ಆದ್ಮಿ ಪಕ್ಷದ (AAP) ಭದ್ರಕೋಟೆಗೆ ಇಂದು ಭಾರಿ ಬಿರುಕು ಕಾಣಿಸಿಕೊಂಡಿದೆ. ಎಎಪಿ ಪಕ್ಷದ ಪ್ರಭಾವಿ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಅಧಿಕೃತವಾಗಿ ಕೇಸರಿ ಧ್ವಜ ಹಿಡಿಯಲು ತೀರ್ಮಾನಿಸಿದ್ದಾರೆ. ಅವರೊಂದಿಗೆ ಪಕ್ಷದ ಪ್ರಮುಖ ಸಂಸದರು ಮತ್ತು ಮಾಜಿ ಕ್ರಿಕೆಟಿಗ ಹರ್ಬಜನ್ ಸಿಂಗ್ ಕೂಡ ಬಿಜೆಪಿ ಸೇರುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಯಾರೆಲ್ಲಾ ಬಿಜೆಪಿ ಸೇರ್ಪಡೆ?
ಲಬ್ಯವಾಗಿರುವ ಮಾಹಿತಿಯ ಪ್ರಕಾರ, ರಾಘವ್ ಚಡ್ಡಾ ಅವರೊಂದಿಗೆ ಆಪ್‌ನ ಇತರ ಪ್ರಮುಖ ರಾಜ್ಯಸಭಾ ಸಂಸದರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮೂಲಗಳ ಪ್ರಕಾರ, ಆಪ್‌ನ ಒಟ್ಟು 7 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಬಜನ್ ಸಿಂಗ್ ಅವರ ನಿರ್ಧಾರ ಕೂಡ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.
ಹೊಗಳಿಕೆಯೇ ಮುಳುವಾಯಿತೇ?
ಕಳೆದ ಕೆಲವು ದಿನಗಳಿಂದ ಎನ್‌ಡಿಎ (NDA) ಸರ್ಕಾರದ ಕಾರ್ಯವೈಖರಿ ಮತ್ತು ಬಿಜೆಪಿ ನಾಯಕತ್ವವನ್ನು ರಾಘವ್ ಚಡ್ಡಾ ಮುಕ್ತಕಂಠದಿಂದ ಹೊಗಳುತ್ತಿದ್ದರು. ಇದು ಎಎಪಿ ನಾಯಕರ ಕೆಂಗಣ್ಣಿಗೆ ತುತ್ತಾಗಿತ್ತು. ಇದೀಗ ಎಎಪಿಗೆ ಅಧಿಕೃತವಾಗಿ ರಾಜೀನಾಮೆ ನೀಡಿರುವ ಅವರು, “ಮೋದಿ ಸರ್ಕಾರದ ನಾಯಕತ್ವ ಮತ್ತು ಅಭಿವೃದ್ಧಿ ಕೆಲಸಗಳು ನನ್ನನ್ನು ಸೆಳೆದಿವೆ” ಎಂದು ಹೇಳುವ ಮೂಲಕ ತಮ್ಮ ಮುಂದಿನ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ ಮತ್ತು ದೆಹಲಿಯಲ್ಲಿ ಅಧಿಕಾರ ಹಿಡಿದು ರಾಷ್ಟ್ರೀಯ ಪಕ್ಷವಾಗಿ ಬೆಳೆಯುತ್ತಿದ್ದ ಆಮ್ ಆದ್ಮಿ ಪಕ್ಷಕ್ಕೆ ಪ್ರಮುಖ ನಾಯಕರುಗಳೇ ಕೈಕೊಡುತ್ತಿರುವುದು ಅರವಿಂದ್ ಕೇಜ್ರಿವಾಲ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.




