ಇತ್ತೀಚಿನ ವೇಗದ ಜೀವನಶೈಲಿ, ಹೆಚ್ಚಿದ ಒತ್ತಡ, ಮೊಬೈಲ್ ಬಳಕೆ ಮತ್ತು ಆಹಾರ ಪದ್ಧತಿ ನಮ್ಮ ನಿದ್ರೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. “ನಿದ್ದೆ ಸರಿಯಾಗಿ ಬರ್ತಿಲ್ವಾ?” ಎಂದು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುವ ಸಮಸ್ಯೆ, ವಾಸ್ತವದಲ್ಲಿ ದೇಹವು ನೀಡುತ್ತಿರುವ ದೊಡ್ಡ ಎಚ್ಚರಿಕೆಯ ಸಂಕೇತವಾಗಿರಬಹುದು.
ದೇಹದಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳು ಅಥವಾ ಲಕ್ಷಣಗಳು ಆರೋಗ್ಯದಲ್ಲಿ ಏನೋ ತಪ್ಪಾಗಿದೆ ಎಂದು ಸೂಚಿಸುತ್ತವೆ. ಆದರೆ ನಾವು ಅವನ್ನು ಲಘುವಾಗಿ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ರಾತ್ರಿಯಿಡೀ ನಿದ್ದೆ ಆಗದಿರುವುದು ಅಥವಾ ಮರುಮರು ಎಚ್ಚರಗೊಳ್ಳುವುದು ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.
ರಾತ್ರಿಯಲ್ಲಿ ಮರುಮರು ಎಚ್ಚರಗೊಳ್ಳುತ್ತಿದ್ದೀರಾ?
ನೀವು ರಾತ್ರಿ ಮಲಗಿದ ಕೂಡಲೇ ನಿದ್ದೆಗೆ ಜಾರದೇ ಇರೋದು, ಅಥವಾ ಸ್ವಲ್ಪ ಹೊತ್ತಿಗೊಮ್ಮೆ ಎಚ್ಚರಗೊಳ್ಳೋದು ಸಾಮಾನ್ಯ ಅನಿಸಬಹುದು. ಆದರೆ ಇದು ಸ್ಲೀಪ್ ಅಪ್ನಿಯಾ (Sleep Apnea) ಎಂಬ ಅಪಾಯಕಾರಿ ನಿದ್ರೆ ಸಂಬಂಧಿತ ಕಾಯಿಲೆಯ ಲಕ್ಷಣವಾಗಿರಬಹುದು.
ಸ್ಲೀಪ್ ಅಪ್ನಿಯಾ ಎಂದರೇನು?
ಸ್ಲೀಪ್ ಅಪ್ನಿಯಾ ಎಂದರೆ ನಿದ್ರೆಯ ಸಮಯದಲ್ಲಿ ಉಸಿರಾಟವು ಮರು ನಿಲ್ಲುವ ಸ್ಥಿತಿ. ಈ ವೇಳೆ ದೇಹಕ್ಕೆ ಅಗತ್ಯವಿರುವ ಆಮ್ಲಜನಕ ಸರಿಯಾಗಿ ಸಿಗದೆ ನಿದ್ರೆಗೆ ಅಡ್ಡಿಪಡಿಸುತ್ತದೆ. ಇದರಿಂದ ದೇಹ ಮತ್ತು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಜೋರಾಗಿ ಗೊರಕೆ ಹೊಡೆಯುತ್ತಿದ್ದೀರಾ?
ನಿದ್ರೆಯಲ್ಲಿ ಜೋರಾಗಿ ಗೊರಕೆ ಹೊಡೆಯುವುದು ಕೇವಲ ಅಸಹ್ಯವಲ್ಲ. ಅದು ಅಪಾಯದ ಸಂಕೇತವೂ ಹೌದು. ವಿಶೇಷವಾಗಿ ಗೊರಕೆ ಜೊತೆಗೆ ಉಸಿರಾಟ ನಿಂತಂತೆ ಅನುಭವವಾದರೆ ತಕ್ಷಣ ಎಚ್ಚರವಾಗಬೇಕು.
ಸ್ಲೀಪ್ ಅಪ್ನಿಯಾ ಪ್ರಮುಖ ಲಕ್ಷಣಗಳು
ಆರೋಗ್ಯ ತಜ್ಞರ ಪ್ರಕಾರ ಈ ಲಕ್ಷಣಗಳು ಸ್ಲೀಪ್ ಅಪ್ನಿಯಾ ಅಪಾಯವನ್ನು ಸೂಚಿಸುತ್ತವೆ.
-
ಬೆಳಗ್ಗೆ ಎದ್ದ ಕೂಡಲೇ ತಲೆನೋವು
-
ಹಗಲಿನ ವೇಳೆಯಲ್ಲಿ ಅತಿಯಾದ ನಿದ್ರಾಹೀನತೆ
-
ಸದಾ ಕಿರಿಕಿರಿ ಮತ್ತು ಬೇಸರ
-
ಗಮನ ಕೇಂದ್ರೀಕರಿಸಲು ಕಷ್ಟ
-
ಬೆಳಗ್ಗೆ ಬಾಯಿ ಒಣಗುವುದು
-
ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಅನುಭವ
ಈ ಲಕ್ಷಣಗಳು ದೀರ್ಘಕಾಲ ಇದ್ದರೆ ಹೃದಯ ಸಂಬಂಧಿತ ಕಾಯಿಲೆ, ರಕ್ತದೊತ್ತಡ, ಮಧುಮೇಹ ಹಾಗೂ ಸ್ಟ್ರೋಕ್ ಅಪಾಯವೂ ಹೆಚ್ಚಾಗುತ್ತದೆ.
ತಪಾಸಣೆ ಮಾಡಿಸಿಕೊಳ್ಳುವುದು ಏಕೆ ಮುಖ್ಯ?
ನೀವು ಮೇಲಿನ ಲಕ್ಷಣಗಳನ್ನು ಏಕಕಾಲದಲ್ಲಿ ಅನುಭವಿಸುತ್ತಿದ್ದರೆ, ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಸ್ಲೀಪ್ ಟೆಸ್ಟ್ (Sleep Study) ಮೂಲಕ ಸ್ಲೀಪ್ ಅಪ್ನಿಯಾ ಇರುವುದನ್ನು ದೃಢಪಡಿಸಲಾಗುತ್ತದೆ.
ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆ
ಸ್ಲೀಪ್ ಅಪ್ನಿಯಾ ಚಿಕಿತ್ಸೆಯಲ್ಲಿ ಮೊದಲ ಹಂತವಾಗಿ ವೈದ್ಯರು ಜೀವನಶೈಲಿ ಬದಲಾವಣೆಗಳನ್ನು ಶಿಫಾರಸು ಮಾಡುತ್ತಾರೆ.
-
ತೂಕ ನಿಯಂತ್ರಣ
-
ಧೂಮಪಾನ ಮತ್ತು ಮದ್ಯಪಾನ ತಪ್ಪಿಸುವುದು
-
ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ
-
ನಿಯಮಿತ ನಿದ್ರಾ ಸಮಯ ಪಾಲನೆ
ಇವುಗಳಿಂದಲೂ ಸಮಸ್ಯೆ ನಿಯಂತ್ರಣವಾಗದಿದ್ದರೆ CPAP ಯಂತ್ರ ಬಳಕೆಯನ್ನು ಸಲಹೆ ಮಾಡಬಹುದು. ಇದು ನಿದ್ರೆಯ ವೇಳೆ ಉಸಿರಾಟ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ.
ನಿದ್ರೆಯನ್ನು ನಿರ್ಲಕ್ಷಿಸಬೇಡಿ
ನಿದ್ದೆ ದೇಹದ ಪುನಶ್ಚೇತನಕ್ಕೆ ಅತ್ಯಂತ ಅಗತ್ಯ. “ಇದು ಚಿಕ್ಕ ಸಮಸ್ಯೆ” ಎಂದು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗಬಹುದು. ನಿಮ್ಮ ನಿದ್ದೆಯ ಗುಣಮಟ್ಟದ ಬಗ್ಗೆ ಜಾಗರೂಕರಾಗಿ.





