ಮೈ ಕೊರೆಯುವ ಚಳಿಗಾಲವು ಕೇವಲ ಶೀತ, ಕೆಮ್ಮನ್ನು ಮಾತ್ರವಲ್ಲದೆ, ಸೈನಸ್ (Sinusitis) ಅನ್ನೋ ಸಮಸ್ಯೆಗೂ ಕಾರಣವಾಗುತ್ತದೆ. ಸೈನಸ್ ಎಂದರೆ ಮೂಗು, ಕೆನ್ನೆ ಮತ್ತು ಹಣೆಯ ಸುತ್ತಲಿನ ಗಾಳಿಯ ಕುಳಿಗಳಲ್ಲಿ ಉಂಟಾಗುವ ಉರಿಯೂತ ಅಥವಾ ಸೋಂಕು. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ ಮತ್ತು ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ ಇದರಿಂದ ಈ ಸೈನಸ್ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗಮನಿಸದಿದ್ದರೆ, ಇದು ಕೇವಲ ಮೂಗಿನ ಸಮಸ್ಯೆಯಾಗಿ ಉಳಿಯದೆ ಕಿವಿಯ ಸೋಂಕಿಗೂ ಕಾರಣವಾಗಬಹುದು.
ಸೈನಸ್ ಸಮಸ್ಯೆ ಹೆಚ್ಚಾಗಲು ಕಾರಣವೇನು?
ಸಾಮಾನ್ಯವಾಗಿ ಚಳಿಗಾಲದ ಒಣ ಹವೆಯಿಂದಾಗಿ ಮೂಗಿನ ಒಳಗಿರುವ ಲೋಳೆಯ ಪೊರೆಗಳು ಒಣಗುತ್ತವೆ. ಈ ಸಂದರ್ಭದಲ್ಲಿ ಮೂಗಿನ ಮಾರ್ಗದಲ್ಲಿ ಲೋಳೆಯು (Mucus) ಗಟ್ಟಿಯಾಗಿ ಸಂಗ್ರಹವಾಗತೊಡಗುತ್ತದೆ. ಈ ರೀತಿ ದೀರ್ಘಕಾಲ ಲೋಳೆ ಸಂಗ್ರಹವಾದರೆ ಅದು ಮೂಗಿನ ಹಾದಿಯನ್ನು ಬಂದ್ ಮಾಡುತ್ತದೆ. ಇಂತಹ ಪರಿಸ್ಥಿತಿ ಮುಂದುವರಿದರೆ ಅದು ಗಂಭೀರ ಸೋಂಕಿಗೆ ತಿರುಗಿ, ಶಸ್ತ್ರಚಿಕಿತ್ಸೆ ಮಾಡುವ ಅನಿವಾರ್ಯತೆ ಉಂಟಾಗಬಹುದು. ಸೈನಸ್ ಕುಳಿಗಳು (ಸೈನಸ್ ಬರುವ ಜಾಗ) ಕಿವಿಯ ನರಗಳಿಗೂ ಹತ್ತಿರವಿರುವುದರಿಂದ, ಇಲ್ಲಿನ ಸೋಂಕು ಸುಲಭವಾಗಿ ಕಿವಿಗೆ ಹರಡಿ ಕಿವಿ ನೋವು ಅಥವಾ ಕಿವುಡುತನದಂತಹ ಸಮಸ್ಯೆಗಳನ್ನು ತಂದೊಡ್ಡಬಹುದು.
ಯಾರಿಗೆ ಅಪಾಯ ಹೆಚ್ಚು?
-
ಪದೇ ಪದೇ ಅಲರ್ಜಿ ಮತ್ತು ಅಸ್ತಮಾ ಸಮಸ್ಯೆ ಇರುವವರು.
-
ಆಗಾಗ ಶೀತ ಮತ್ತು ಜ್ವರದಿಂದ ಬಳಲುವವರು.
-
ಧೂಮಪಾನ ಮಾಡುವವರು (ಹೊಗೆಯಿಂದ ಮೂಗಿನ ಒಳಪದರ ಬೇಗನೆ ಹಾನಿಗೊಳಗಾಗುತ್ತದೆ).
-
ಧೂಳು ಮತ್ತು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವವರು.
ಸೈನಸ್ ಮತ್ತು ಕಿವಿ ಸೋಂಕು ತಡೆಯಲು ಸರಳ ಕ್ರಮಗಳು
ಚಳಿಗಾಲದಲ್ಲಿ ಸೈನಸ್‌ನಿಂದ ದೂರವಿರಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
-
ಬೆಚ್ಚಗಿನ ಉಡುಪು: ಹೊರಗೆ ಹೋಗುವಾಗ ತಣ್ಣನೆ ಗಾಳಿ ಸೋಕದಂತೆ ಕಿವಿ ಮತ್ತು ಮೂಗನ್ನು ಸ್ಕಾರ್ಫ್ ಅಥವಾ ಮಂಕಿ ಕ್ಯಾಪ್ ಮೂಲಕ ಮುಚ್ಚಿಕೊಳ್ಳಿ.
-
ಹೈಡ್ರೇಶನ್ (ನೀರು ಕುಡಿಯುವುದು): ದಿನವಿಡೀ ಸಾಕಷ್ಟು ಪ್ರಮಾಣದ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಮೂಗಿನಲ್ಲಿರುವ ಲೋಳೆಯನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ.
-
ಆವಿ ತೆಗೆದುಕೊಳ್ಳುವುದು: ವಾರದಲ್ಲಿ ಎರಡು ಬಾರಿಯಾದರೂ ಹಬೆ ಅಥವಾ ಸ್ಟೀಮ್ ತೆಗೆದುಕೊಳ್ಳುವುದರಿಂದ ಮೂಗಿನ ಮಾರ್ಗವು ಸ್ವಚ್ಛವಾಗುತ್ತದೆ.
-
ಅಲರ್ಜಿಯಿಂದ ದೂರವಿರಿ: ಧೂಳು, ಸಾಕುಪ್ರಾಣಿಗಳ ಕೂದಲು ಅಥವಾ ಹೂವಿನ ಪರಾಗಗಳಿಂದ ಅಲರ್ಜಿ ಉಂಟಾಗದಂತೆ ಎಚ್ಚರವಹಿಸಿ.
-
ಧೂಮಪಾನ ತ್ಯಜಿಸಿ: ಸೈನಸ್ ಸಮಸ್ಯೆ ಇರುವವರು ಸಿಗರೇಟ್ ಹೊಗೆಯಿಂದ ದೂರವಿರುವುದು ಅತ್ಯಗತ್ಯ.
ಮೂಗಿನ ದಟ್ಟಣೆ (Nasal Congestion), ವಿಪರೀತ ತಲೆನೋವು, ಕಿವಿ ನೋವು ಅಥವಾ ತಲೆತಿರುಗುವಿಕೆ ಎರಡು-ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಿ. ಮನೆಮದ್ದುಗಳಿಂದ ಗುಣವಾಗದ ಸೈನಸ್ ಮುಂದೆ ದೊಡ್ಡ ಮಟ್ಟದ ಸೋಂಕಿಗೆ ಕಾರಣವಾಗಬಹುದು.





