ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇತ್ತೀಚೆಗೆ ಅಸಾಮಾನ್ಯ ಹವಾಮಾನ ಪರಿಸ್ಥಿತಿ ಎದುರಾಗಿದೆ. ಚಳಿಗಾಲದಲ್ಲಿ ಚುಮು ಚುಮು ಚಳಿಯ ನಡುವಲ್ಲೇ ಚಂಡಮಾರುತದ ಪರಿಣಾಮವಾಗಿ ತುಂತುರು ಮಳೆ ಆಗ್ತಿದೆ. ಜೊತೆಯಲ್ಲೇ ಹವಾಮಾನದ ಹಠಾತ್ ಬದಲಾವಣೆಗಳು ಜನರನ್ನು ಕಂಗೆಡಿಸಿದೆ. ಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ವಿಶೇಷವಾಗಿ ಶ್ವಾಸಕೋಶ ಮತ್ತು ಅಲರ್ಜಿ ಸಂಬಂಧಿ ರೋಗಗಳು ಹೆಚ್ಚಾಗ್ತಿವೆ.
ಸಾಮಾನ್ಯವಾಗಿ ನವೆಂಬರ್‌ನಿಂದ ಫೆಬ್ರವರಿವರೆಗಿನ ಕಾಲ ಚಳಿಗಾಲವೆಂದು ಪರಿಗಣಿಸಲ್ಪಟ್ಟರೂ, ಈ ವರ್ಷ ಈ ಋತುವು ಅನಿರೀಕ್ಷಿತ ಮಳೆ ಮತ್ತು ಗಾಳಿಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ರಾತ್ರಿ ಮತ್ತು ಬೆಳಿಗ್ಗೆ ತಂಪಾದ ತಾಪಮಾನವಿದ್ದರೂ, ದಿನದ ಸಮಯದಲ್ಲಿ ಆಕಸ್ಮಿಕ ಮಳೆ ಮತ್ತು ಗುಡುಗು ಸಹಿತ ಮಳೆಗಳು ಸಾಮಾನ್ಯವಾಗಿವೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಕೂಡ ಇದೇ ಸನ್ನಿವೇಶವನ್ನು ಎದುರಿಸುತ್ತಿವೆ.
ಆರೋಗ್ಯದ ಮೇಲೆ ಆಗ್ತಿರುವ ಪರಿಣಾಮಗಳೇನು..?
ಹವಾಮಾನದ ಈ ಹಠಾತ್ ಏರುಪೇರುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿವೆ. ಅತ್ಯಂತ ಸಾಮಾನ್ಯವಾಗಿ ಕಂಡು ಬರ್ತಿರುವ ಸಮಸ್ಯೆಗಳೆಂದರೆ:
- ನೆಗಡಿ ಮತ್ತು ಫ್ಲು:ತಾಪಮಾನದ ಹಠಾತ್ ಬದಲಾವಣೆಯು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ವೈರಲ್ ಸೋಂಕುಗಳು ಸುಲಭವಾಗಿ ಹರಡುತ್ತವೆ.
- ಅಲರ್ಜಿ:ಚಂಡಮಾರುತ ಮತ್ತು ಮಳೆಯಿಂದಾಗಿ ಧೂಳು ಮತ್ತು ಧೂಳಿನ ಕಣಗಳು ಗಾಳಿಯಲ್ಲಿ ಹರಡಿ, ಅಲರ್ಜಿಕ್ ರೈನೈಟಿಸ್ (ಅಲರ್ಜಿ ನೆಗಡಿ), ಗಂಟಲಿನ ಸಮಸ್ಯೆ ಮತ್ತು ಕಣ್ಣು ಕೆಂಪಾಗುವ ಸಮಸ್ಯೆಗಳನ್ನು ಉಂಟು ಮಾಡುತ್ತವೆ.
- ಉಸಿರಾಟದ ತೊಂದರೆಗಳು:ಆರ್ದ್ರತೆಯ ಹೆಚ್ಚಳದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ ಹೆಚ್ಚುತ್ತಿದೆ. ಇದರಿಂದಾಗಿ ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂಥಾ ಉಸಿರಾಟದ ತೊಂದರೆಗಳು ತೀವ್ರವಾಗ್ತಿವೆ.
- ಸಂಧಿವಾತ ಮತ್ತು ಸ್ನಾಯು ನೋವು:ಹೆಚ್ಚಿನ ಉಷ್ಣಾಂಶ ಮತ್ತು ಆರ್ದ್ರತೆಯಿಂದಾಗಿ ಸಂಧಿವಾತ ಮತ್ತು ಇತರ ಸ್ನಾಯು-ಅಸ್ಥಿಪಂಜರದ ನೋವುಗಳು ಹೆಚ್ಚುತ್ತಿವೆ.
ಈ ಎಲ್ಲಾ ಕಾರಣಗಳಿಂದಾಗಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಿ ಕಡಿಮೆಯಾಗ್ತಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ವೈದ್ಯರು ಚಳಿ, ಕೆಮ್ಮು ಮತ್ತು ಜ್ವರದ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗ್ತಿದೆ ಎನ್ನುತ್ತಿದ್ದಾರೆ.
ಈ ಸಂದರ್ಭದಲ್ಲಿ ನಾವೇನು ಮಾಡಬೇಕು..?
ಈ ಹವಾಮಾನ ಸನ್ನಿವೇಶವನ್ನು ಸೂಕ್ತವಾದ ಎಚ್ಚರಿಕೆ ಮತ್ತು ನಿವಾರಣಾ ಕ್ರಮಗಳ ಮೂಲಕ ಸಮರ್ಥವಾಗಿ ಎದುರಿಸಬೇಕಾಗಿದೆ. ಇದಕ್ಕಾಗಿ ತಜ್ಞರು ಕೆಲವೊಂದು ಶಿಫಾರಸುಗಳನ್ನು ಮಾಡಿದ್ದಾರೆ.
- ಉಷ್ಣಾಂಶಕ್ಕೆ ತಕ್ಕಂತೆ ಉಡುಪು ಧರಿಸಿ: ಪದರಗಳನ್ನು ಹೊಂದಿರುವ ಉಡುಪು ಧರಿಸುವುದರ ಮೂಲಕ ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳಬಹುದು.
- ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಕೈಗಳನ್ನು ನಿಯಮಿತವಾಗಿ ಶುದ್ಧೀಕರಿಸಿ ಮತ್ತು ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್0 ಬಳಸಿ.
- ಆರೋಗ್ಯಕರ ಆಹಾರ ಮತ್ತು ನೀರು: ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಮತೋಲಿತ ಆಹಾರ ಮತ್ತು ಸಾಕಷ್ಟು ನೀರು ಕುಡಿಯೋದು ಅತ್ಯಗತ್ಯ.
- ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ: ಆರೋಗ್ಯ ಸಮಸ್ಯೆಗಳು ತೀವ್ರವಾದಾಗ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಿರಿ.





