ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಟ್ರಂಪ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಆರೋಪಿಯ ಫೋಟೋ ಹಾಗೂ ಆತ ಶ್ವೇತಭವನದ ಭದ್ರತಾ ತಡೆಗೋಡೆಗಳನ್ನು ದಾಟಿ ಒಳನುಗ್ಗಲು ಯತ್ನಿಸಿದ ವಿಡಿಯೋ ಕೂಡಾ ಸೇರಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಧಿತನನ್ನು ಥಾಮಸ್ ಅಲೆನ್ ಎಂದು ಗುರುತಿಸಲಾಗಿದ್ದು, ಆತ ಕ್ಯಾಲಿಫೋರ್ನಿಯಾದ ಟೊರೆನ್ಸ್ ನಗರದ ನಿವಾಸಿ ಎಂದು ತಿಳಿದುಬಂದಿದೆ. 1995ರಲ್ಲಿ ಜನಿಸಿದ 31 ವರ್ಷದ ಥಾಮಸ್, ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಎಂದು ತಿಳಿದುಬಂದಿದೆ. ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಆತ, ನಂತರ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.
ಅಷ್ಟೇ ಅಲ್ಲದೆ, ಥಾಮಸ್ ಅಲೆನ್ ನಾಸಾದಲ್ಲಿ ರಿಸರ್ಚ್ ಫೆಲೋಶಿಪ್ ಕೂಡಾ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಲಾಸ್ ಏಂಜಲೀಸ್ ಕೌಂಟಿಯಲ್ಲಿ ‘ಟೀಚರ್ ಆಫ್ ದಿ ಮಂತ್’ ಪ್ರಶಸ್ತಿ ಪಡೆದಿದ್ದ ಆತ, ಅತ್ಯುತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದನು.
ಮಾಹಿತಿಯ ಪ್ರಕಾರ, ಆತ ವಾಷಿಂಗ್ಟನ್‌ಗೆ ಬಂದು ಹಿಲ್ಟನ್ ಹೋಟೆಲ್‌ನಲ್ಲಿ ತಂಗಿದ್ದನು. ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಕ್ಕೆ ಮುನ್ನವೇ ಆತ ಹೋಟೆಲ್‌ಗೆ ಚೆಕ್-ಇನ್ ಮಾಡಿದ್ದಾನೆ. ಹೋಟೆಲ್ ಒಳಗೆ ಬಂದೂಕು ತರಲು ಅವನು ಬಳಸಿದ ಮಾರ್ಗಗಳ ಕುರಿತು ತನಿಖೆ ನಡೆಯುತ್ತಿದೆ.
ಎಫ್‌ಬಿಐ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ. ಈ ದಾಳಿಯ ಹಿಂದೆ ಯಾವುದಾದರೂ ಸಂಘಟಿತ ಶಕ್ತಿಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಇನ್ನೊಂದೆಡೆ, ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆಯೇ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಜೊತೆಗೆ, ಅವನು ಡೆಮಾಕ್ರಟಿಕ್ ಪಕ್ಷದ ಸದಸ್ಯನಾಗಿದ್ದು, 2024ರ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಪರ ದೇಣಿಗೆ ನೀಡಿದ್ದಾನೆ ಎಂಬ ಮಾಹಿತಿ ಹೊರಬಂದಿದೆ.
ಥಾಮಸ್ ಅಲೆನ್ ಯಾಕೆ ಇಂತಹ ದಾಳಿಗೆ ಮುಂದಾದನು ಎಂಬುದು ಇನ್ನೂ ನಿಗೂಢವಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಸತ್ಯಾಂಶಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ.
https://youtu.be/IUqIBiPltxk?si=v8Xlw1GTcrs47fH2




