ವಾಷಿಂಗ್ಟನ್, ಮಾರ್ಚ್ 18: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ (US Iran War) ಮತ್ತಷ್ಟು ಉಲ್ಬಣಗೊಂಡಿದೆ. ಅಮೆರಿಕದ ಕೇಂದ್ರ ಕಮಾಂಡ್ (CENTCOM) ಹರ್ಮುಜ್ ಜಲಸಂದಿ (Strait of Hormuz) ಬಳಿಯ ಇರಾನ್ ಕರಾವಳಿಯಲ್ಲಿರುವ ಮಿಸೈಲ್ ನೆಲೆಗಳ ಮೇಲೆ 5,000 ಪೌಂಡ್ (ಸುಮಾರು 2,200 ಕೆಜಿ) ತೂಕದ ಬಂಕರ್ ಬಸ್ಟರ್ ಬಾಂಬ್‌ಗಳನ್ನು (Bunker Buster Bombs) ಪ್ರಯೋಗಿಸಿರುವುದಾಗಿ ಘೋಷಿಸಿದೆ..
ಇತ್ತೀಚಿನ ದಿನಗಳಲ್ಲಿ ಇರಾನ್, ಹರ್ಮುಜ್ ಜಲಸಂದಿಯ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ದಾಳಿಗಳಿಂದಾಗಿ ವಾಣಿಜ್ಯ ಹಡಗುಗಳು ಹಾಗೂ ತೈಲ ಸಾಗಣೆ ಹಡಗುಗಳು ಭಯಭೀತಗೊಂಡಿದ್ದವು. ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಅಮೆರಿಕ ಕಠಿಣ ಕ್ರಮಕ್ಕೆ ಮುಂದಾಗಿ, ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿ ಇರಾನ್‌ನ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಸಾಮಾನ್ಯ ಬಾಂಬ್‌ಗಳಿಗಿಂತ ವಿಭಿನ್ನವಾಗಿರುವ ಈ ಬಂಕರ್ ಬಸ್ಟರ್ ಬಾಂಬ್‌ಗಳು ಸುಮಾರು 2,200 ಕೆಜಿಗೂ ಹೆಚ್ಚು ತೂಕ ಹೊಂದಿದ್ದು, ನೆಲದಾಳಕ್ಕೆ ಕೊರೆದು ಒಳಗೆ ಪ್ರವೇಶಿಸಿ ನಂತರ ಸ್ಫೋಟಗೊಳ್ಳುತ್ತವೆ. ಇದರಿಂದಾಗಿ ಭೂಗರ್ಭದಲ್ಲಿರುವ ಗುಪ್ತ ಸೈನಿಕ ನೆಲೆಗಳು, ಬಂಕರ್‌ಗಳು ಮತ್ತು ಶಸ್ತ್ರಾಗಾರಗಳು ಸಂಪೂರ್ಣವಾಗಿ ನಾಶವಾಗುತ್ತವೆ.
ಇರಾನ್ ಸೈನಿಕರು ಕ್ಷಿಪಣಿ ದಾಳಿಗಳನ್ನು ನಡೆಸಿದ ನಂತರ ಭೂಗರ್ಭದಲ್ಲಿರುವ ಬಂಕರ್‌ಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರೆಂಬ ಮಾಹಿತಿ ಅಮೆರಿಕಕ್ಕೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಂಕರ್‌ಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯಿಂದ ಇರಾನ್‌ಗೆ ದೊಡ್ಡ ಮಟ್ಟದ ಹಾನಿಯಾಗಿರುವ ಸಾಧ್ಯತೆ ಇದೆ.
ಹರ್ಮುಜ್ ಜಲಸಂದಿಯ ಸಮುದ್ರ ತೀರ ಪ್ರದೇಶಗಳಲ್ಲಿ ನಡೆದ ಈ ದಾಳಿಗಳು ಸೈನಿಕ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಪ್ರದೇಶದ ನಿಯಂತ್ರಣ ಕಳೆದುಕೊಳ್ಳುವುದರಿಂದ ಇರಾನ್‌ಗೆ ದೊಡ್ಡ ಹಿನ್ನಡೆಯಾಗಬಹುದು. ಮತ್ತೊಂದೆಡೆ, ಅಮೆರಿಕ ತನ್ನ ಪ್ರಭಾವವನ್ನು ಈ ಭಾಗದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಈ ದಾಳಿ ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆಯೂ ಇದೆ. ಇರಾನ್ ಇದಕ್ಕೆ ಪ್ರತಿಯಾಗಿ ಮತ್ತಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆ ಇದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚುತ್ತಿದೆ.





