ಗ್ಯಾಂಗ್ಟಾಕ್ ಸೆ.25: ಸಿಕ್ಕಿಂನಲ್ಲಿ ಭಾರಿ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿದೆ. ತಡಾಂಗ್ ಪ್ರದೇಶದ ರಿಂಬಿ ನದಿ ಸುತ್ತಮುತ್ತ ನಿನ್ನೆ ಗುರುವಾರ ತಡರಾತ್ರಿ ಭೂಕುಸಿತ ಸಂಭವಿಸಿದೆ. ಮಧ್ಯರಾತ್ರಿಯಿಂದ ಗುಡ್ಡಗಳಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಮತ್ತು ಬಂಡೆಗಳು ಕುಸಿದು ಜನವಸತಿ ಪ್ರದೇಶಗಳಿಗೆ ನುಗ್ಗಿವೆ.
- ಸಿಕ್ಕಿಂನ ತಡಾಂಗ್‌ನ ರಿಂಬಿ ನದಿ ಸುತ್ತಮುತ್ತ ಭೂಕುಸಿತ
- ಘಟನೆಯಲ್ಲಿ ಈವರೆಗೆ ನಾಲ್ವರು ಸಾವು
- ಅಪಾಯದ ವಲಯದಲ್ಲಿದ್ದ 128ಕ್ಕೂ ಹೆಚ್ಚು ಜನರ ಸ್ಥಳಾಂತರ
ಭೂಕುಸಿತದಿಂದಾಗಿ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತೀವ್ರ ಅಪಾಯದ ವಲಯದಲ್ಲಿದ್ದ 128ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಸಂತ್ರಸ್ತರು ಹಾಗೂ ಸ್ಥಳಾಂತರಗೊಂಡವರಿಗಾಗಿ ಸಿಂಗ್ಲಿತಾಮ್‌ನಲ್ಲಿ ತುರ್ತು ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.
ಈ ಭೂಕುಸಿತದ ಪರಿಣಾಮ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಕುಸಿದುಬಿದ್ದಿರುವುದರಿಂದ ರಿಂಬಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೂ ತೀವ್ರ ಹೊಡೆತ ಬಿದ್ದಿದೆ. ಭೂಕುಸಿತದ ಅವಶೇಷಗಳು ರಸ್ತೆಯ ಮೇಲೆ ಬಿದ್ದಿರುವ ಹಿನ್ನೆಲೆಯಲ್ಲಿ ರಿಂಬಿ–ಯುಕ್ಸೋಮ್ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರಿಂದ ಸ್ಥಳೀಯರ ಸಂಚಾರ ಹಾಗೂ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ರಿಂಬಿ ನದಿಯ ನೀರಿನ ಹರಿವಿನಲ್ಲಿ ಬದಲಾವಣೆ
ಭೂಕುಸಿತದಿಂದ ರಿಂಬಿ ನದಿಗೆ ಅಡ್ಡಲಾಗಿ ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಕುಸಿದು ಬಿದ್ದಿವೆ. ಇದರಿಂದ ನದಿಯ ನೀರಿನ ಹರಿವಿನ ದಿಕ್ಕಿನಲ್ಲಿ ಬದಲಾವಣೆ ಉಂಟಾಗಿದ್ದು, ನೀರು ರಸ್ತೆ ಹಾಗೂ ಸುತ್ತಮುತ್ತಲಿನ ಭೂಭಾಗವನ್ನು ಸವೆಯುತ್ತಿದೆ ಇದು ಭಾರೀ ಆತಂಕವನ್ನು ಮೂಡಿಸಿದೆ.
ನದಿಯ ಹರಿವಿಗೆ ಅಡ್ಡಿಯಾಗಿರುವ ಮಣ್ಣು ಮತ್ತು ಬಂಡೆಗಳ ಕಾರಣ ಕೃತಕ ಸರೋವರ ನಿರ್ಮಾಣವಾಗುವ ಆತಂಕ ಎದುರಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಅಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಸ್ಥಳೀಯ ಆಡಳಿತ ಹಾಗೂ ರಕ್ಷಣಾ ತಂಡಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಅಪಾಯದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ. ಭಾರಿ ಮಳೆ ಮುಂದುವರಿದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.





