ನವದೆಹಲಿ (ಮೇ.5): ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನವು ತನ್ನ ಸಾಲದ ಹೊರೆಯನ್ನು ನಿವಾರಿಸಿಕೊಳ್ಳಲು 50 ವರ್ಷಗಳ ನಂತರ ಮತ್ತೆ ವಿದೇಶಗಳಿಗೆ ಮದ್ಯ ರಫ್ತು ಮಾಡಲು ಆರಂಭಿಸಿದೆ. ದೇಶದ ಏಕೈಕ ಸ್ಥಳೀಯ ಮದ್ಯ ತಯಾರಿಕಾ ಸಂಸ್ಥೆ ‘ಮರ್ರಿ ಬ್ರೂವರಿ’ (Murree Brewery) ಏಪ್ರಿಲ್ 2026ರಲ್ಲಿ ಬ್ರಿಟನ್, ಜಪಾನ್, ಪೋರ್ಚುಗಲ್ ಮತ್ತು ಥೈಲ್ಯಾಂಡ್‌ಗಳಿಗೆ ಬಿಯರ್ ಸೇರಿದಂತೆ ಮದ್ಯದ ಉತ್ಪನ್ನಗಳನ್ನು ರಫ್ತು ಮಾಡಲು ಶುರು ಮಾಡಿದೆ.
ಸುಮಾರು 138 ಬಿಲಿಯನ್ ಡಾಲರ್ ಸಾಲದ ಹೊರೆ
ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ದೇಶವು ಸುಮಾರು 138 ಬಿಲಿಯನ್ ಡಾಲರ್ (ಸರಿಸುಮಾರು 11.5 ಲಕ್ಷ ಕೋಟಿ ರೂ.) ವಿದೇಶಿ ಸಾಲವನ್ನು ಹೊಂದಿದೆ. ಸರ್ಕಾರದ ಆದಾಯ ಮತ್ತು ವೆಚ್ಚದ ನಡುವೆ ಭಾರಿ ಅಂತರವಿದೆ. 2026ರ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ 11,072 ಬಿಲಿಯನ್ ಪಾಕ್ ರೂಪಾಯಿಗಳು (40 ಬಿಲಿಯನ್) ಇದ್ದರೆ, ವೆಚ್ಚವು 16,286 ಬಿಲಿಯನ್ ರೂಪಾಯಿಗಳಿಗೆ (58 ಬಿಲಿಯನ್) ತಲುಪಿದೆ. ಇದರಲ್ಲಿ ಸುಮಾರು 8,200 ಬಿಲಿಯನ್ ರೂಪಾಯಿಗಳು ($30 ಬಿಲಿಯನ್) ಕೇವಲ ಸಾಲದ ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ. ಹಣದ ಅಭಾವದಿಂದಾಗಿ ಈಗ ಮದ್ಯ ರಫ್ತಿನ ಮೂಲಕ ವಿದೇಶಿ ವಿನಿಮಯ ಗಳಿಸಲು ಸರ್ಕಾರ ಮುಂದಾಗಿದೆ.
50 ವರ್ಷಗಳ ನಿಷೇಧವೇಕೆ?
1977ರ ಏಪ್ರಿಲ್‌ನಲ್ಲಿ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿ ಮದ್ಯ ಮಾರಾಟ ಮತ್ತು ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದರು. ಆಗ ವಿರೋಧ ಪಕ್ಷದವರು ಭುಟ್ಟೋ ಅವರ ಮೇಲೆ ‘ಪಾಶ್ಚಿಮಾತ್ಯ ಜೀವನಶೈಲಿ’ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಒತ್ತಡಕ್ಕೆ ಮಣಿದ ಅವರು ಬಾರ್‌ಗಳು ಮತ್ತು ಕ್ಯಾಸಿನೊಗಳನ್ನು ಮುಚ್ಚುವುದಾಗಿ ಘೋಷಿಸಿದರು. ನಂತರ 1977ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಜಿಯಾ-ಉಲ್-ಹಕ್, ಮದ್ಯ ನಿಷೇಧವನ್ನು ಇಸ್ಲಾಮಿಕ್ ಕಾನೂನಿನೊಂದಿಗೆ ಜೋಡಿಸಿ ಮುಸ್ಲಿಮರಿಗೆ ಮದ್ಯ ಸೇವಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದರು. ಆದರೆ ಮುಸ್ಲಿಮೇತರರಿಗೆ ಪರವಾನಗಿ ಆಧಾರದಲ್ಲಿ ಮದ್ಯ ಖರೀದಿಗೆ ಅವಕಾಶವಿತ್ತು.
ಮುಷರಫ್‌ನಿಂದ ಸಡಿಲಿಕೆ, ಈಗ ಮತ್ತೆ ರಫ್ತು
ನಂತರ ಜನರಲ್ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಮದ್ಯದ ಕಾನೂನು ಸ್ವಲ್ಪ ಸಡಿಲಗೊಂಡಿತು. ಅವರು ನಿಷೇಧವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೂ ಮುಸ್ಲಿಮರಿಗೆ ಮದ್ಯ ಲಭ್ಯವಾಗುವುದು ಸುಲಭವಾಯಿತು. 2025ರಲ್ಲಿ ಪಾಕ್ ಸರ್ಕಾರ ಆರ್ಥಿಕ ಕಾರಣಗಳಿಗಾಗಿ ಮತ್ತೆ ಮದ್ಯ ರಫ್ತಿಗೆ ಅನುಮತಿ ನೀಡಿತು. ಮರ್ರಿ ಬ್ರೂವರಿಯ ಸಿಇಒ ಇಸ್ಫನ್ಯಾರ್ ಭಂಡಾರಾ ಅವರು ಮದ್ಯ ರಫ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಸದ್ಯ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಭಾಗವಲ್ಲದ ದೇಶಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಲಾಗಿದೆ.
1979ರಲ್ಲಿ ಪಾಕಿಸ್ತಾನದಲ್ಲಿ ಕೇವಲ ಎರಡು ಹೆರಾಯಿನ್ ಪ್ರಕರಣಗಳು ವರದಿಯಾಗಿದ್ದವು. ಆದರೆ ಮದ್ಯ ನಿಷೇಧದಿಂದಾಗಿ ಜನರು ಹೆಚ್ಚು ಅಪಾಯಕಾರಿಯಾದ ಹೆರಾಯಿನ್ ವ್ಯಸನಕ್ಕೆ ತಿರುಗಿದರು ಎಂಬ ಆರೋಪವಿದೆ. 1985ರ ವೇಳೆಗೆ ಪಾಕಿಸ್ತಾನ ವಿಶ್ವದ ಅತಿದೊಡ್ಡ ಹೆರಾಯಿನ್ ಗ್ರಾಹಕ ದೇಶಗಳಲ್ಲಿ ಒಂದಾಯಿತು.
ಅಲ್ಲದೆ, ಅಕ್ರಮ ಮದ್ಯ ಮಾಫಿಯಾದಿಂದ ವಿಷಪೂರಿತ ಮದ್ಯ ಸೇವಿಸಿ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಧಾರ್ಮಿಕ ಸಂಘಟನೆಗಳು ಮದ್ಯಪಾನವನ್ನು ‘ಬ್ರಿಟಿಷರ ಕಾಲದ ಅಭ್ಯಾಸ’ ಎಂದು ಟೀಕಿಸಿದರೂ, ಸಿಂಧೂ ನಾಗರಿಕತೆಯ ಕಾಲದಲ್ಲೂ ವೈನ್ ತಯಾರಿಸಲಾಗುತ್ತಿತ್ತು ಎಂಬ ಕುರುಹುಗಳು ಮೊಹೆಂಜೊದಾರೋದಲ್ಲಿ ದೊರಕಿವೆ. ಮೊಘಲರ ಕಾಲದಲ್ಲೂ ಮದ್ಯ, ಗಾಂಜಾ ಬಳಕೆ ಸಾಮಾನ್ಯವಾಗಿತ್ತು.
ಮರ್ರಿ ಬ್ರೂವರಿಯ ರಫ್ತು ವ್ಯವಸ್ಥಾಪಕ ರಮೀಜ್ ಶಾ ಅವರು, ಸದ್ಯಕ್ಕೆ ವಿದೇಶಗಳಲ್ಲಿ ಮಾರುಕಟ್ಟೆ ಜಾಲವನ್ನು ಸೃಷ್ಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಿಸುವ ಯೋಜನೆಯಿದೆ ಎಂದು ತಿಳಿಸಿದ್ದಾರೆ. 70ರ ದಶಕದ ನಿಷೇಧಕ್ಕೂ ಮೊದಲು ಮರ್ರಿ ಬ್ರೂವರಿ ಭಾರತ, ಅಫ್ಘಾನಿಸ್ತಾನ ಮತ್ತು ಅಮೆರಿಕಕ್ಕೂ ಮದ್ಯ ರಫ್ತು ಮಾಡುತ್ತಿತ್ತು. ಆರ್ಥಿಕ ದುಸ್ಥಿತಿಯು ಪಾಕಿಸ್ತಾನದ 50 ವರ್ಷಗಳ ಹಳೆಯ ನೀತಿಯನ್ನು ಬದಲಿಸುವಂತೆ ಮಾಡಿದೆ. ಆದರೆ ಇದು ದೇಶದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದೇ ಎಂಬುದು ಕಾದು ನೋಡಬೇಕಾಗಿದೆ.





