ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಪಾಕಿಸ್ತಾನಕ್ಕೆ ಇರಾನ್ ಜೊತೆಗಿನ ಉದ್ವಿಗ್ನತೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ದೇಶದಲ್ಲಿ ತೀವ್ರ ಇಂಧನ ಕೊರತೆ ಉಂಟಾಗಿದ್ದು, ಇದರ ಪರಿಣಾಮವಾಗಿ ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಗಗನಕ್ಕೇರಿಸಿದೆ. ಈ ಬೆಲೆ ಏರಿಕೆಯು ಸಾಮಾನ್ಯ ಜನರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಗುರುವಾರ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್, ಇಂಧನ ದರಗಳಲ್ಲಿನ ಭಾರಿ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಮತ್ತು ಸ್ಥಳೀಯವಾಗಿ ಸಂಪನ್ಮೂಲಗಳ ಕೊರತೆಯಿಂದಾಗಿ ಈ ನಿರ್ಧಾರ ಅನಿವಾರ್ಯ ಎಂದು ಅವರು ಸಮರ್ಥಿಸಿಕೊಂಡರು. ದೇಶದ ಜನರು ಈಗಾಗಲೇ ಹಣದುಬ್ಬರದಿಂದ ತತ್ತರಿಸಿದ್ದಾರೆ. ಆದರೆ ಈ ಕ್ರಮದ ಹೊರತು ಬೇರೆ ದಾರಿಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಹೊಸ ದರಗಳು ಎಷ್ಟು?
ಸರ್ಕಾರದ ಹೊಸ ಆದೇಶದ ಪ್ರಕಾರ, ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಶೇ. 42.7 ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ 458.40 ಪಾಕಿಸ್ತಾನಿ ರೂಪಾಯಿ (ಭಾರತೀಯ ರೂಪಾಯಿಯಲ್ಲಿ ಸರಿಸುಮಾರು ₹ 458) ತಲುಪಿದೆ. ಇನ್ನು ಡೀಸೆಲ್ ದರದಲ್ಲಿ ಶೇ. 54.9 ರಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 520.35 ಪಾಕಿಸ್ತಾನಿ ರೂಪಾಯಿ (ಸುಮಾರು ₹ 520) ಗೆ ಬಂದು ನಿಂತಿದೆ. ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಜನಸಾಮಾನ್ಯರ ಮೇಲೆ ಭಾರಿ ಹೊರೆಯಾಗಿ ಪರಿಣಮಿಸಿದೆ.
ಬೆಲೆ ಏರಿಕೆಗೆ ಕಾರಣವೇನು?
ಇರಾನ್ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಪರಿಸ್ಥಿತಿಯೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ಇರಾನ್ ದೇಶವು ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಯನ್ನು ಮುಚ್ಚಿರುವುದು ಇಡೀ ಏಷ್ಯಾದ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಶ್ವದ ಒಟ್ಟು ಇಂಧನ ಸಾಗಾಟದ ಐದನೇ ಒಂದು ಭಾಗದಷ್ಟು ತೈಲ ಈ ಜಲಮಾರ್ಗದ ಮೂಲಕವೇ ಸಾಗುತ್ತದೆ. ಪಾಕಿಸ್ತಾನವು ತನ್ನ ತೈಲ ಮತ್ತು ಅನಿಲದ ಬಹುತೇಕ ಅಗತ್ಯಕ್ಕಾಗಿ ಸಂಪೂರ್ಣವಾಗಿ ಆಮದನ್ನೇ ಅವಲಂಬಿಸಿದೆ. ಹಾಗಾಗಿ ಈ ಪ್ರಮುಖ ಮಾರ್ಗ ಬಂದ್ ಆಗಿರುವುದು ದೇಶದ ಆರ್ಥಿಕತೆಯ ಮೇಲೆ ಮರಣಾಂತಿಕ ಹೊಡೆತ ನೀಡಿದೆ. ಪರ್ಯಾಯ ಇಂಧನ ಮೂಲಗಳ ಕೊರತೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯೂ ಸಮಸ್ಯೆಯನ್ನು ಉಲ್ಬಣಗೊಳಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಪರ್ವೈಜ್ ಮಲಿಕ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. “ದೇಶದ ಜನರನ್ನು ರಕ್ಷಿಸಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ ನಮ್ಮ ಸಂಪನ್ಮೂಲಗಳು ಅತ್ಯಂತ ಸೀಮಿತ. ಈ ಯುದ್ಧ ಯಾವಾಗ ಮುಗಿಯುತ್ತದೆ ಎಂಬುದರ ಬಗ್ಗೆ ಯಾವುದೇ ಸುಳಿವು ನಮಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಯಿತು.” ಎಂದು ತಿಳಿಸಿದ್ದಾರೆ..





