ಹೈದರಾಬಾದ್‌ನ ಹೈಟೆಕ್ಸ್ (HITEX) ಎಕ್ಸಿಬಿಷನ್ ಸೆಂಟರ್‌ನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ 72ನೇ ವಿಶ್ವ ಸುಂದರಿ 2025 ಸ್ಪರ್ಧೆಗೆ ಮೇ 31, 2025ರಂದು ತೆರೆ ಬಿದ್ದಿದೆ. 108 ದೇಶಗಳಿಂದ ಭಾಗವಹಿಸಿದ್ದ ಸುಂದರಿಯರ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಓಪಲ್ ಸುಚಾತ ಅವರು ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಪ್ರತಿನಿಧಿ ನಂದಿನಿ ಗುಪ್ತಾ ಅವರು ಅಂತಿಮ 40ರ ಸುತ್ತಿಗೂ ತಲುಪದೆ ನಿರಾಸೆ ಅನುಭವಿಸಿದ್ದಾರೆ.
ವಿಶ್ವ ಸುಂದರಿ 2025 ಸ್ಪರ್ಧೆಯು ಒಂದು ವಾರದ ಕಾಲ ವಿವಿಧ ಸುತ್ತುಗಳ ಮೂಲಕ ನಡೆಯಿತು. ‘ಬ್ಯೂಟಿ ವಿತ್ ಪರ್ಪಸ್’, ‘ಸ್ಪೋರ್ಟ್ಸ್’, ‘ಮಲ್ಟಿಮೀಡಿಯಾ’, ‘ಟ್ಯಾಲೆಂಟ್’, ‘ಟಾಪ್ ಮಾಡೆಲ್’, ಮತ್ತು ‘ಹೆಡ್ ಟು ಹೆಡ್’ ಸುತ್ತುಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಅಂತಿಮ 40 ಸ್ಪರ್ಧಿಗಳನ್ನು ಜಡ್ಜ್‌ಗಳು ಸಂದರ್ಶನದ ಮೂಲಕ ಆಯ್ಕೆ ಮಾಡಿದರು. ಈ ಎಲ್ಲ ಸುತ್ತುಗಳಲ್ಲಿ ಓಪಲ್ ಸುಚಾತ ಅವರು ಅದ್ಭುತ ಪ್ರದರ್ಶನ ನೀಡಿ, 8.50 ಕೋಟಿ ರೂಪಾಯಿ ಬಹುಮಾನದ ಜೊತೆಗೆ ವಿಶ್ವ ಸುಂದರಿ ಕಿರೀಟವನ್ನು ಗಳಿಸಿದರು.
ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ನಂದಿನಿ ಗುಪ್ತಾ, ಆರಂಭಿಕ ಸುತ್ತುಗಳಲ್ಲಿ ಚುರುಕಾಗಿ ಪ್ರದರ್ಶನ ನೀಡಿದರೂ, ಕ್ವಾಟರ್‌ಫೈನಲ್‌ಗೂ ಮುನ್ನವೇ ಸ್ಪರ್ಧೆಯಿಂದ ಹೊರಬಿದ್ದರು. ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಈ ಫಲಿತಾಂಶ ನಿರಾಸೆ ತಂದಿದೆ. ಆದರೆ, ಭಾರತದ ಆತಿಥ್ಯದಲ್ಲಿ ನಡೆದ ಈ ಸ್ಪರ್ಧೆಯು ಜಾಗತಿಕ ಗಮನವನ್ನು ಸೆಳೆದಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಓಪಲ್ ಸುಚಾತ, “ಈ ಗೆಲುವು ಕೇವಲ ನನ್ನ ವೈಯಕ್ತಿಕ ಗೆಲುವಲ್ಲ. ತಮ್ಮ ಕನಸುಗಳನ್ನು ಜಗತ್ತಿಗೆ ತೋರಿಸಲು ಬಯಸುವ ಎಲ್ಲ ಯುವತಿಯರ ಗೆಲುವಾಗಿದೆ. ವಿಶ್ವ ಸುಂದರಿಯಾಗಿರುವ ಈ ಸಮಯವನ್ನು ಸಕಾರಾತ್ಮಕ ಬದಲಾವಣೆಗಾಗಿ ಬಳಸಿಕೊಳ್ಳುವೆ,” ಎಂದರು. ಈ ಸ್ಪರ್ಧೆಯು ಸೌಂದರ್ಯದ ಜೊತೆಗೆ ಸಾಮಾಜಿಕ ಕಾರಣಗಳಿಗೆ ಒತ್ತು ನೀಡುವ ‘ಬ್ಯೂಟಿ ವಿತ್ ಪರ್ಪಸ್’ ಧ್ಯೇಯವನ್ನು ಎತ್ತಿಹಿಡಿಯಿತು.