ಕ್ವಾಲೆ, ಕೀನ್ಯಾ (ಅಕ್ಟೋಬರ್ 28, 2025): ಕೀನ್ಯಾದ ಸಿಂಬಾ ಗೊಲಿನಿ ಬಳಿಯ ಕ್ವಾಲೆಯಲ್ಲಿ ಪ್ರವಾಸಿಗರನ್ನು ಹೊತ್ತಿದ್ದ ಲೈಟರ್ ವಿಮಾನವೊಂದು (5Y-CCA) ಪತನಗೊಂಡಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ 12 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಿಯಾನಿಯಿಂದ ಟೇಕ್‌ಆಫ್ ಆಗಿ ಕಿಚ್ವ ತೆಂಬೋ ಕಡೆಗೆ ಸಾಗುತ್ತಿದ್ದ ವಿಮಾನವು ಬೆಳಿಗ್ಗೆ 8:30ರ ಸುಮಾರಿಗೆ ಏಕಾಏಕಿ ಪತನಗೊಂಡಿದೆ. ಈ ದುರಂತವನ್ನು ಕೀನ್ಯಾ ಸಿವಿಲ್ ಏವಿಯೇಶನ್ ಅಥಾರಿಟಿ ಖಚಿತಪಡಿಸಿದೆ.
ವಿಮಾನವು ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೆ, ಸಾಮಾನ್ಯ ರೀತಿಯಲ್ಲಿ ಹಾರಾಟ ಆರಂಭಿಸಿತ್ತು. ಆದರೆ, ಅನಿರೀಕ್ಷಿತವಾಗಿ ವಿಮಾನವು ನಿಯಂತ್ರಣ ಕಳೆದುಕೊಂಡು ಭೂಮಿಗೆ ಅಪ್ಪಳಿಸಿದೆ. ಪತನಗೊಂಡ ಕೆಲವೇ ಕ್ಷಣಗಳಲ್ಲಿ ವಿಮಾನದ ಇಂಧನ ಟ್ಯಾಂಕ್‌ನಿಂದ ಬೆಂಕಿ ಕಾಣಿಸಿಕೊಂಡು, ವಿಮಾನವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಪೊಲೀಸ್ ತಂಡ, ರಕ್ಷಣಾ ಪಡೆ, ಮತ್ತು ಅಗ್ನಿಶಾಮಕ ದಳ ತಕ್ಷಣ ಧಾವಿಸಿತು. ಆದರೆ, ವಿಮಾನವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದರಿಂದ ಯಾವುದೇ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೀನ್ಯಾ ಸಿವಿಲ್ ಏವಿಯೇಶನ್ ಅಥಾರಿಟಿಯು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ. ಆದರೆ, ಪತನಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೈಲಟ್‌ಗೆ ಉತ್ತಮ ಹಾರಾಟದ ಅನುಭವವಿತ್ತು, ಮತ್ತು ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದರೆ, ಈ ದುರಂತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
 
			
 
					




 
                             
                             
                             
                             
                            