ವಾಷಿಂಗ್ಟನ್ / ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ತನ್ನ ಪ್ರಮುಖ ಮಿಲಿಟರಿ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ. ಇರಾನ್‌ನ ಸೇನಾ ವ್ಯವಸ್ಥೆ, ಪ್ರಮುಖ ಕಮಾಂಡರ್‌ಗಳು ಹಾಗೂ ರಕ್ಷಣಾ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಹೇಳಿಕೆಯ ಪ್ರಕಾರ, ಇರಾನ್ ಬಳಿ ಈಗ ಬಲಿಷ್ಠ ನೌಕಾಪಡೆ, ವಾಯುಪಡೆ ಮತ್ತು ವಿಮಾನ ನಿರೋಧಕ ವ್ಯವಸ್ಥೆಗಳು ಬಹುತೇಕ ಉಳಿದಿಲ್ಲ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಂದ ಇರಾನ್‌ನ ಉನ್ನತ ಮಟ್ಟದ ನಾಯಕತ್ವ ದುರ್ಬಲಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಇದರ ನಡುವೆ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಕುರಿತು ಟ್ರಂಪ್ ಮಾಡಿದ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೊಜ್ತಬಾ ಖಮೇನಿ ಶೇ.90ರಷ್ಟು ಮುಗಿದಿದ್ದಾರೆ ಎಂದು ಟ್ರಂಪ್ ಹೇಳಿದ್ದು, ಅವರ ಆರೋಗ್ಯ ಮತ್ತು ಭದ್ರತೆ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಕೂಡ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಇರಾನ್-ಅಮೆರಿಕ ಸಂಘರ್ಷ ಮತ್ತೆ ತೀವ್ರ
ಕೆಲವು ಸಮಯದ ವಿರಾಮದ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವುದಾಗಿ ಟ್ರಂಪ್ ಅಮೆರಿಕ ಕಾಂಗ್ರೆಸ್‌ಗೆ ಮಾಹಿತಿ ನೀಡಿದ್ದಾರೆ.
ಮಧ್ಯಪ್ರಾಚ್ಯದ ಪ್ರಮುಖ ತೈಲ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಈಗ ಈ ಸಂಘರ್ಷದ ಪ್ರಮುಖ ಕೇಂದ್ರವಾಗಿದೆ. ವಿಶ್ವದ ತೈಲ ಮತ್ತು ಅನಿಲ ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಜಲಸಂಧಿಯ ನಿಯಂತ್ರಣಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.
ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಅಂತಾರಾಷ್ಟ್ರೀಯ ಹಡಗುಗಳ ಸುರಕ್ಷತೆಗಾಗಿ ಹೊಸ ಶುಲ್ಕ ವಿಧಿಸುವ ಸಾಧ್ಯತೆಯ ಬಗ್ಗೆಯೂ ಟ್ರಂಪ್ ಸೂಚನೆ ನೀಡಿದ್ದಾರೆ. ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಟ್ಯಾಂಕರ್‌ಗಳ ಮೇಲೆ ದಾಳಿ, ಭಾರತೀಯ ನಾವಿಕ ಸಾವು
ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿದೆ. ಬಹ್ರೈನ್ ಮತ್ತು ಯುಎಇಗೆ ಸೇರಿದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಭಾರತೀಯ ಮೂಲದ ಓರ್ವ ನಾವಿಕ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಯುಎಇ, ಇರಾನ್‌ನ ಕ್ರಮಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ.





