ಟೆಹ್ರಾನ್/ವಾಷಿಂಗ್ಟನ್, ಮೇ 26: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಭಾರೀ ಬೆಳವಣಿಗೆಯೊಂದು ನಡೆದಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು ಅಮೆರಿಕದ ಎಂಕ್ಯೂ-9 (MQ-9) ಡ್ರೋನ್ ಅನ್ನು ಹೊಡೆದುರುಳಿಸಿದೆ. ಅಮೆರಿಕವು ತನ್ನ ಎಂಕ್ಯೂ-9 ಡ್ರೋನ್ ಮತ್ತು ಎಫ್-35 (F-35) ಫೈಟರ್ ಜೆಟ್ ಅನ್ನು ಇರಾನ್ ವಾಯು ಗಡಿ ಪ್ರವೇಶಿಸಿದ್ದನ್ನು ಪ್ರತಿಭಟಿಸಿ IRGC ಈ ಕ್ರಮ ಕೈಗೊಂಡಿದೆ.
ದಾಳಿಯ ಹಿನ್ನೆಲೆ ಏನು?
ಕೆಲವು ದಿನಗಳ ಹಿಂದೆ ಅಮೆರಿಕವು ಇರಾನ್‌ನ ಬಂದರ್ ಅಬ್ಬಾಸ್ (Bandar Abbas) ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಉದ್ವಿಗ್ನತೆ ಈಗಾಗಲೇ ಹೆಚ್ಚಾಗಿತ್ತು. ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕವು ಇರಾನ್ ವಾಯು ಗಡಿಯೊಳಗೆ ತನ್ನ MQ-9 ಡ್ರೋನ್ ಮತ್ತು F-35 ಫೈಟರ್ ಜೆಟ್ ಅನ್ನು ಕಳುಹಿಸಿದೆ ಎಂದು IRGC ಆರೋಪಿಸಿದೆ.
“ಶಾಂತಿ ಮಾತುಕತೆಯ ನೆಪದಲ್ಲಿ ಅಮೆರಿಕ ನಮ್ಮ ವಾಯು ಗಡಿ ಪ್ರವೇಶಿಸಿ ಗೂಢಚರ್ಯೆ ನಡೆಸಲು ಯತ್ನಿಸಿದೆ. ಅಮೆರಿಕದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ” ಎಂದು IRGC ಹೇಳಿಕೆಯಲ್ಲಿ ತಿಳಿಸಿದೆ.
ಹೇಗೆ ನಡೆಯಿತು ದಾಳಿ?
IRGCನ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ MQ-9 ಡ್ರೋನ್ ಅನ್ನು ಪತ್ತೆ ಹಚ್ಚಿತು. ಇದು ಇರಾನ್ ವಾಯು ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆಯೇ IRGC ಕ್ಷಿಪಣಿ ದಾಳಿ ನಡೆಸಿತು. ಡ್ರೋನ್ ಸಂಪೂರ್ಣವಾಗಿ ನಾಶವಾಯಿತು. ಅದೇ ಸಮಯದಲ್ಲಿ, ಸಮೀಪದಲ್ಲಿದ್ದ ಅಮೆರಿಕದ F-35 ಫೈಟರ್ ಜೆಟ್ ಮೇಲೂ IRGC ದಾಳಿ ನಡೆಸಿತು. ಆದರೆ, ಆ ಯುದ್ಧ ವಿಮಾನವು ಕೂದಲೆಳೆಯ ಅಂತರದಲ್ಲಿ ಪಾರಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
“F-35 ವಿಮಾನವು ತಕ್ಷಣಕ್ಕೆ ನಿಯಂತ್ರಣ ತಪ್ಪಿ ಪಲಾಯನ ಮಾಡಿತು. IRGC ದಾಳಿಯ ವೇಗ ಮತ್ತು ನಿಖರತೆಯನ್ನು ಕಂಡು ಅಮೆರಿಕದ ಪೈಲಟ್‌ಗಳು ದಿಗಿಲುಗೊಂಡಿದ್ದಾರೆ” ಎಂದು IRGCನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಮೆರಿಕದ ಪ್ರತಿಕ್ರಿಯೆ
ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸುದ್ದಿಯನ್ನು ದೃಢಪಡಿಸಿಲ್ಲ. ಆದರೆ ಅನಧಿಕೃತ ಮೂಲಗಳ ಪ್ರಕಾರ, ‘ಶಾಂತಿ ಮಾತುಕತೆಯ ಹಿನ್ನೆಲೆ ಇಷ್ಟು ದೊಡ್ಡ ಸಂಘರ್ಷ ಅನಾವಶ್ಯಕ’ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ಶಾಂತಿ ಮಾತುಕತೆಯೇನಾಯ್ತು?
ಈ ದಾಳಿಯ ನಂತರ ಪ್ರಸ್ತುತ ನಡೆಯುತ್ತಿದ್ದ ಕದನ ವಿರಾಮದ ಮಾತುಕತೆ ಸ್ಥಗಿತಗೊಂಡಿದೆ. ಅಮೆರಿಕ ಮತ್ತು ಇರಾನ್ ನಡುವಿನ ರಾಯಭಾರ ಕಚೇರಿಗಳ ಮಟ್ಟದ ಮಾತುಕತೆಗಳು ಅನಿರ್ದಿಷ್ಟ ಕಾಲಕ್ಕೆ ಮುಂದೂಡಲ್ಪಟ್ಟಿವೆ ಎಂದು ವರದಿಯಾಗಿದೆ.





