ಇರಾನ್ : ಇರಾನ್‌ನಲ್ಲಿ ನಡೆಯುತ್ತಿರುವ ಭೀಕರ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗಾಗಲೇ ಸುಮಾರು 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಗಂಭೀರ ಪರಿಸ್ಥಿತಿಯ ನಡುವೆಯೂ ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ತಕ್ಷಣವೇ ದೇಶವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ತುರ್ತು ಸಲಹೆ ನೀಡಿದೆ.
ಇರಾನ್‌ನ ಹಲವು ನಗರಗಳಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಮಾರ್ಪಟ್ಟಿದ್ದು, ಭದ್ರತಾ ಪಡೆಗಳೊಂದಿಗೆ ಘರ್ಷಣೆಗಳು ನಡೆಯುತ್ತಿವೆ. ರಸ್ತೆ ಬಂದ್, ಸಂಚಾರ ಸ್ಥಗಿತ, ಇಂಟರ್ನೆಟ್ ವ್ಯತ್ಯಯ ದಿನನಿತ್ಯದ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಹಿನ್ನಲೆಯಲ್ಲಿ ಭಾರತೀಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಲಭ್ಯವಿರುವ ಎಲ್ಲ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ತಕ್ಷಣವೇ ಇರಾನ್ ತೊರೆಯುವಂತೆ ರಾಯಭಾರ ಕಚೇರಿಯು ಸೂಚಿಸಿದೆ.
ಭಾರತ ಸರ್ಕಾರವು ಜನವರಿ 5, 2025ರಂದು ಹೊರಡಿಸಿದ್ದ ಮಾರ್ಗಸೂಚಿಯ ಮುಂದುವರಿದ ಭಾಗವಾಗಿ, ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಈ ಹೊಸ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇರಾನ್‌ನಲ್ಲಿ ವಾಸವಾಗಿರುವ ಭಾರತೀಯ ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಹಾಗೂ ಪ್ರವಾಸಿಗರು ಯಾವುದೇ ವಿಳಂಬ ಮಾಡದೆ ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ಮಾರ್ಗಗಳ ಮೂಲಕ ದೇಶ ತೊರೆಯಬೇಕು ಎಂದು ಸೂಚಿಸಲಾಗಿದೆ.
ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸಲಹೆ ನೀಡಿದ್ದು, ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಿಂದ ದೂರವಿರಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಸ್ಥಳೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲು ಇರಾನ್‌ನ ಸ್ಥಳೀಯ ಮಾಧ್ಯಮಗಳನ್ನು ನಿರಂತರವಾಗಿ ಗಮನಿಸುವಂತೆ ಹಾಗೂ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಭದ್ರತಾ ದೃಷ್ಟಿಯಿಂದ, ಎಲ್ಲ ಭಾರತೀಯ ನಾಗರಿಕರು ತಮ್ಮ ಪಾಸ್‌ಪೋರ್ಟ್, ಗುರುತಿನ ಚೀಟಿಗಳು ಹಾಗೂ ಅಗತ್ಯ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಅಗತ್ಯವಿದ್ದರೆ ರಾಯಭಾರ ಕಚೇರಿಯನ್ನು ತಕ್ಷಣ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ತುರ್ತು ಸಂಪರ್ಕ ವಿವರಗಳು
ಮೊಬೈಲ್ ಸಂಖ್ಯೆಗಳು
+989128109115
+989128109109
+989128109102
+989932179359
ಇಮೇಲ್: cons.tehran@mea.gov.in
ಇನ್ನೂ ಕೂಡ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳದ ಭಾರತೀಯ ನಾಗರಿಕರು ತಕ್ಷಣವೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ನೋಂದಣಿಗಾಗಿ ಈ ಲಿಂಕ್ ಬಳಸಬಹುದು.
👉 https://www.meaers.com/request/home
ಈ ಲಿಂಕ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಲಭ್ಯವಿದೆ.
ಇರಾನ್‌ನಲ್ಲಿ ಇಂಟರ್ನೆಟ್ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರು ನೋಂದಣಿ ಮಾಡಲು ಸಾಧ್ಯವಾಗದಿದ್ದರೆ ಭಾರತದಲ್ಲಿರುವ ಅವರ ಕುಟುಂಬ ಸದಸ್ಯರು ಅವರ ಪರವಾಗಿ ನೋಂದಣಿ ಮಾಡಿಕೊಡಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ.
ಇದರ ಜೊತೆಗೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕೂಡ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಇರಾನ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು” ಎಂದು ಎಚ್ಚರಿಸಿದೆ.





