ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಭೀಕರ ಏರ್ಸ್ಟ್ರೈಕ್‌ನಲ್ಲಿ ಇರಾನ್ ನಲುಗಿಹೋಗಿದೆ. ದಾಳಿಯ ಮೊದಲ ದಿನವೇ 160 ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ತಮ್ಮ ಪ್ರೀತಿಯ ಮಡಿಲ ಮರಿಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ದಕ್ಷಿಣ ಇರಾನ್ನ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆಬ್ರವರಿ 28 ರಂದು ಈ ದಾಳಿ ನಡೆದಿದೆ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಹೆಚ್ಚಿನ ಜನ ಸಂಚಾರವಿರುವ ಸ್ಥಳಗಳ ಮೇಲೆ ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ ಎಂದು ಇರಾನ್ ಸರ್ಕಾರ ಆರೋಪಿಸಿದೆ. ದಾಳಿಯ ತೀವ್ರತೆಗೆ ಸಂಪೂರ್ಣ ಶಾಲೆ ಕುಸಿದು ಬಿದ್ದಿದ್ದು, ಮಕ್ಕಳು ಮತ್ತು ಶಿಕ್ಷಕರು ಅವಶೇಷಗಳಡಿಯಲ್ಲಿ ಸಿಲುಕಿದ್ದರು.
ರಕ್ಷಣಾ ಕಾರ್ಯಾಚರಣೆ ವೇಳೆ ನೂರಾರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಗಾಯಗೊಂಡ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ದಾಳಿಯ ಬಳಿಕ ಸ್ಥಳೀಯ ಸ್ಮಶಾನದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ನೂರಾರು ಸಮಾಧಿ ಗುಂಡಿಗಳನ್ನು ತೆರೆಯಲಾಯಿತು. ಡ್ರೋನ್ ಮೂಲಕ ಸೆರೆಹಿಡಿದ ಈ ದೃಶ್ಯಗಳನ್ನು ಇರಾನ್ ಸರ್ಕಾರ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.
ಚಿತ್ರಗಳಲ್ಲಿ ಕಾಣುವ ದೃಶ್ಯ ಅತ್ಯಂತ ಹೃದಯವಿದ್ರಾವಕವಾಗಿದೆ. ತೆರೆದ ಗುಂಡಿಗಳ ಮುಂದೆ ತಮ್ಮ ಮಕ್ಕಳ ಮೃತದೇಹಗಳನ್ನು ಹಿಡಿದುಕೊಂಡು ತಾಯಂದಿರು, ತಂದೆಯರು ಕಣ್ಣೀರಿಟ್ಟಿದ್ದಾರೆ.
ದಾಳಿಯ ಬೆನ್ನಲ್ಲೇ ಇರಾನ್ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. “ಶೈಕ್ಷಣಿಕ ಸಂಸ್ಥೆ ಅಥವಾ ಆಸ್ಪತ್ರೆ ಅಥವಾ ಯಾವುದೇ ಇತರ ನಾಗರಿಕ ರಚನೆಯ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಯುದ್ಧ ಅಪರಾಧವಾಗಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ಈ ಕೃತ್ಯ ಘೋರ ಯುದ್ಧಾಪರಾಧ” ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಂತರರಾಷ್ಟ್ರೀಯ ಮಾನವೀಯ ಸಂಸ್ಥೆಗಳು ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಯುದ್ಧದ ನಡುವೆಯೂ ನಾಗರಿಕರ ರಕ್ಷಣೆ ಕಡ್ಡಾಯ ಎಂದು ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಆಗ್ರಹಿಸಿವೆ.
ಈ ದಾಳಿಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮತ್ತೊಮ್ಮೆ ಭುಗಿಲೆದ್ದಿದ್ದು, ಅಮೆರಿಕದ ನೇರ ಪಾಲ್ಗೊಳ್ಳುವಿಕೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಅಂತರರಾಷ್ಟ್ರೀಯ ಸಮುದಾಯ ತಕ್ಷಣವೇ ಮಧ್ಯಪ್ರವೇಶಿಸಿ ಈ ಯುದ್ಧಾಪರಾಧದ ಬಗ್ಗೆ ತನಿಖೆ ನಡೆಸಬೇಕೆಂದು ಇರಾನ್ ಆಗ್ರಹಿಸಿದೆ.





