ಲಂಡನ್: ಬ್ರಿಟನ್‌ನಲ್ಲಿ ಶನಿವಾರ ರಾತ್ರಿ ರೈಲಿನಲ್ಲಿ ನಡೆದ ಸಾಮೂಹಿಕ ಚಾಕು ದಾಳಿಯಲ್ಲಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಂಬತ್ತು ಮಂದಿಗೆ ಮಾರಣಾಂತಿಕವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ನಗರದ ವಾಯುವ್ಯಕ್ಕೆ ಸಮೀಪದ ಮಾರುಕಟ್ಟೆ ಪಟ್ಟಣ ಹಂಟಿಂಗ್‌ಡನ್ ಬಳಿ ಸಂಭವಿಸಿದ್ದು, ರೈಲು ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಿದ್ದಾಗ ದುಷ್ಕರ್ಮಿಗಳು ಪ್ರಯಾಣಿಕರ ಮೇಲೆ ಸುಖಾಸುಮ್ಮನೆ ಚಾಕುಗಳಿಂದ ಇರಿದಿದ್ದಾರೆ.
ಈ ಘಟನೆಯು ಲಂಡನ್ ಮಹಾನಗರದ ಹೊರವಲಯದ ರೈಲ್ವೆ ನಿಲ್ದಾಣಗಳಲ್ಲಿ ನಡೆದಿದ್ದು, ಶನಿವಾರ ಸಂಜೆ 7:39ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ದೊರೆತ ತಕ್ಷಣ ಸಶಸ್ತ್ರ ಪೊಲೀಸರು, ಏರ್ ಆಂಬ್ಯುಲೆನ್ಸ್‌ಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದವು. ರೈಲು ಹಂಟಿಂಗ್‌ಡನ್‌ಗೆ ತಲುಪುತ್ತಿದ್ದಂತೆಯೇ ದಾಳಿಯ ತೀವ್ರತೆ ಬಯಲಾಯಿತು. ಬ್ರಿಟಿಷ್ ಸಾರಿಗೆ ಪೊಲೀಸ್ (ಬಿಟಿಪಿ) ಈ ಘಟನೆಯನ್ನು “ಪ್ರಮುಖ ಘಟನೆ” ಎಂದು ಘೋಷಿಸಿ, ತನಿಖೆಯ ಮುಂದಾಳತ್ವ ವಹಿಸಿಕೊಂಡಿದೆ. ಭಾನುವಾರ ಮುಂಜಾನೆ ದಾಳಿಯ ಕೆಲವು ಗಂಟೆಗಳ ನಂತರವೇ ಇಬ್ಬರು ಶಂಕಿತ ಆರೋಪಿಗಳನ್ನು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಕೇಂಬ್ರಿಡ್ಜ್‌ಶೈರ್ ಕಾನ್‌ಸ್ಟಾಬ್ಯುಲರಿ ತಿಳಿಸಿದೆ.
ಬಿಟಿಪಿ ಅಧಿಕಾರಿಗಳ ಹೇಳಿಕೆಯಲ್ಲಿ, “ಹಂಟಿಂಗ್‌ಡನ್ ಸಮೀಪಿಸುತ್ತಿದ್ದ ರೈಲಿನಲ್ಲಿ ಹಲವು ಜನರಿಗೆ ಚಾಕು ಇರಿತವಾಗಿದೆ. ಹತ್ತು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಒಂಬತ್ತು ಮಂದಿಗೆ ಗಂಭೀರ ಗಾಯಗಳಾಗಿವೆ. ಭಯೋತ್ಪಾದಕ ನಿಗ್ರಹ ದಳ ನಮ್ಮ ತನಿಖೆಯನ್ನು ಬೆಂಬಲಿಸುತ್ತಿದೆ. ಘಟನೆಯ ಸಂಪೂರ್ಣ ಸಂದರ್ಭಗಳು ಮತ್ತು ಪ್ರೇರಣೆಯನ್ನು ಸ್ಥಾಪಿಸಲು ನಾವು ತೀವ್ರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಿಚ್ಚಿಡದಿದ್ದರೂ, ಹೊರದೇಶಗಳಿಂದ ವಲಸೆ ಬಂದವರ ಸಂಬಂಧ ಶಂಕೆ ವ್ಯಕ್ತವಾಗುತ್ತಿದೆ. ಬ್ರಿಟನ್‌ನ ಭಯೋತ್ಪಾದಕ ನಿಗ್ರಹ ದಳ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಆಂತರಿಕ ಭದ್ರತಾ ಬೆದರಿಕೆಗಳನ್ನು ಪರಿಶೀಲಿಸುತ್ತಿದೆ.
ಯುಕೆಯ ಈಸ್ಟ್ ಕೋಸ್ಟ್ ಮೇನ್‌ಲೈನ್ ಸೇವೆಗಳನ್ನು ನಿರ್ವಹಿಸುವ ಲಂಡನ್ ನಾರ್ತ್ ಈಸ್ಟರ್ನ್ ರೈಲ್ವೆ (ಎಲ್‌ಎನ್‌ಇಆರ್) ಕಂಪೆನಿ ಈ ಘಟನೆಯನ್ನು ತನ್ನ ರೈಲೊಂದರಲ್ಲಿ ನಡೆದಿದ್ದನ್ನು ದೃಢಪಡಿಸಿದೆ. ರೈಲು ಸೇವೆಗಳು ತಾತ್ಕಾಲಿಕವಾಗಿ ಅಡಚಣೆಗೊಳಗಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಈ ಭೀಕರ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿ, “ಹಂಟಿಂಗ್‌ಡನ್ ಬಳಿಯ ರೈಲಿನಲ್ಲಿ ನಡೆದ ದಾಳಿ ತೀವ್ರ ಆತಂಕಕಾರಿ. ಬಾಧಿತರೊಂದಿಗೆ ನನ್ನ ಆಲೋಚನೆಗಳಿವೆ. ತುರ್ತು ಸೇವೆಗಳ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರದೇಶದ ಜನರು ಪೊಲೀಸರ ಸಲಹೆ ಪಾಲಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.





