ಪ್ರಶಾಂತ್ ಎಸ್, ಸ್ಪೆಷಲ್ ಡೆಸ್ಕ್
ಜಗತ್ತಿನ ಬಿಲಿಯನ್ ಡಾಲರ್ ಒಡೆಯ, ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಸಂಪತ್ತು ಹಾಗೂ ಸಂತಾನದಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಈಗ ಮತ್ತೆ ತಂದೆ ಆಗುವ ಮೂಲಕ 14ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ 14ನೇ ಮಗುವಿಗೆ ತಂದೆ ಆಗಿದ್ದಾರೆ. ಎಲಾನ್ ಮಸ್ಕ್ ಅವರ ಸಂಗಾತಿ ಹಾಗೂ ನ್ಯೂರಾಲಿಂಕ್‌ನ ಕಾರ್ಯಾದರ್ಶಿ ಆಗಿರುವ ಶಿವೊನ್ ಜಿಲಿಸ್ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಈ ವಿಚಾರವನ್ನ ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಎಲಾನ್ ಮಸ್ಕ್, ಶಿವೊನ್ ಜಲಿಸ್ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಸ್ಪ್ರೈಡರ್ ಮತ್ತು ಅಜುರೆ ಅವಳಿ ಮಕ್ಕಳಿದ್ದಾರೆ. ಶಿವೊನ್ ಜಲಿಸ್ ಕಳೆದ ವರ್ಷ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೂರನೇ ಹೆಣ್ಣು ಮಗುವಿಗೆ ಅರ್ಕಾಡಿಯ ಎಂದು ನಾಮಕರಣ ಮಾಡಿದ್ದಾರೆ. ಶಿವೊನ್ ಜಿಲಿಸ್ ಮತ್ತು ಎಲಾನ್ ಮಸ್ಕ್ ದಂಪತಿ ಮೂರನೇ ಹಾಗೂ ನಾಲ್ಕನೇ ಮಗುವಿನ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಮೂರನೇ ಮಗು ಆರ್ಕಾಡಿಯಳ ಒಂದು ವರ್ಷದ ಹುಟ್ಟುಹಬ್ಬದ ದಿನದಂದು ನಾಲ್ಕನೇ ಮಗುವಿನ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಪತಿ ಎಲಾನ್ ಮಸ್ಕ್ ಜೊತೆ ಚರ್ಚೆ ನಡೆಸಿದ ನಂತರ ಶಿವೊನ್ ಜಲಿಸ್, ನಾಲ್ಕನೇ ಮಗು ಜನಿಸಿದ ವಿಚಾರವನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆ ಗಂಡು ಮಗುವಿಗೆ ಸೆಲ್ಡನ್ ಲೈಕರ್ಗಸ್ ಎಂದು ನಾಮಕರಣ ಮಾಡಿದ್ದಾರೆ.
ಜಗತ್ತಿನ ಶ್ರೀಮಂತನಿಗೆ ಪತ್ನಿಯರು, ಮಕ್ಕಳು ಎಷ್ಟು ಗೊತ್ತಾ..?
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ನ ಸಂಪತ್ತಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಸಂತಾನದ ಸೀಕ್ರೆಟ್ ಮಾತ್ರ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. 14ನೇ ಮಗುವಿಗೆ ತಂದೆಯಾಗುವ ಮೂಲಕ ಜಗತ್ತಿನ ಶ್ರೀಮಂತ ಎಲಾನ್ ಮಸ್ಕ್ ಮತ್ತೆ ಹಾಟ್ ಟಾಪಿಕ್ ಆಗಿದ್ದಾರೆ. ನಿಜಕ್ಕೂ ಎಲಾನ್ ಮಸ್ಕ್ ಅವರಿಗೆ ಎಷ್ಟು ಪತ್ನಿಯರು ಇದ್ದಾರೆ..? ಯಾವ ಸಂಗಾತಿಗೆ ಎಷ್ಟು ಮಕ್ಕಳು ಇದ್ದಾರೆ..? ಎಂದು ಚರ್ಚೆ ಶುರುವಾಗಿದೆ. ಅದಕ್ಕೆ ಉತ್ತರ ಮುಂದಿದೆ ಓದಿ..
ಸ್ಪೇಸ್ ಎಕ್ಸ್ನ ಸರದಾರ ಎಲಾನ್ ಮಸ್ಕ್‌ಗೆ ನಾಲ್ವರು ಸಂಗಾತಿಯರು ಇದ್ದಾರೆ. ಮೊದಲನೆ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ ಆರು ಮಕ್ಕಳಿದ್ದಾರೆ. ಎಕ್ಸ್ ಗರ್ಲ್ಫ್ರೆಂಡ್ ಗ್ರೀಮ್ಸ್ ಗೆ ಮೂರು ಮಕ್ಕಳು ಜನಿಸಿದ್ದಾರೆ. ನ್ಯೂರಾಲಿಂಕ್ನ ಕಾರ್ಯದರ್ಶಿ ಆಗಿರುವ ಶಿವೊನ್ ಜಿಲಿಸ್ರ 4 ಮಕ್ಕಳಿಗೆ ಎಲಾನ್ ಮಸ್ಕ್ ತಂದೆ ಆಗಿದ್ದಾರೆ. ಮತ್ತೊಬ್ಬ ಸಂಗಾತಿ, ಲೇಖಕಿ ಆಶ್ಲೆ ಸೆಂಟ್ ಕ್ಲೇರ್ಗೆ ಒಂದು ಮಗುವಿದೆ ಅಂತ ಹೇಳಲಾಗಿದೆ. ಇದನ್ನ ಎಲಾನ್ ಮಸ್ಕ್ ಒಪ್ಪಿಕೊಂಡೂ ಇಲ್ಲ. ಹಾಗಂತ ತಿರಸ್ಕರಿಸಿಯೂ ಇಲ್ಲ.
ಮೊದಲನೆ ಪತ್ನಿಗೆ ಆರು ಮಕ್ಕಳು..!
10 ವಾರದಲ್ಲೇ ಮೊದಲ ಮಗು ಸಾವು..!
ಕೆನಾಡದ ಜಸ್ಟಿನ್ ವಿಲ್ಸನ್ ಹಾಗೂ ಎಲಾನ್ ಮಸ್ಕ್ 2000ನೇ ಇಸವಿಯಲ್ಲಿ ಮದುವೆ ಆಗುತ್ತಾರೆ. ಸಪ್ತಪದಿ ತುಳಿದ ಎರಡು ವರ್ಷದ ನಂತರ ಜಸ್ಟಿನ್ ವಿಲ್ಸನ್ ಮೊದಲನೇ ಮಗುವಿನ ಜನ್ಮ ನೀಡುತ್ತಾರೆ. ಮುದ್ದಾಗಿದ್ದ ಮೊದಲನೇ ಮಗುವಿಗೆ ನಾವೆದ್ ಅಲೆಕ್ಸೆಂಡರ್ ಮಸ್ಕ್ ಎಂದು ನಾಮಕರಣ ಮಾಡಿದ್ದರು. ಹಠಾತ್ ಶಿಶು ಸಾವಿನ ಸಿಂಡ್ರೋಮ್ನಿಂದ ಮೊದಲನೇ ಮಗು 10 ವಾರದಲ್ಲೇ ತೀರಿಕೊಂಡಿತ್ತು. ಮೊದಲ ಮಗುವಿನ ಸಾವಿನಿಂದ ಹೊರಬಂದು IVF ಶಸ್ತ್ರಚಿಕಿತ್ಸೆ ಮುಖಾಂತರ 2004ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅವಳಿ ಮಕ್ಕಳಿಗೆ ಈಗ 20 ವರ್ಷವಾಗಿದ್ದು ಗ್ರಿಫಿನ್ ಆಂಡ್ ವಿವಿಯನ್ ಮಸ್ಕ್ ಎಂದು ಹೆಸರಿಟ್ಟಿದ್ದಾರೆ. 2006ರಲ್ಲಿ ಎಲಾನ್ ಮಸ್ಕ್ ದಂಪತಿ IVF ಶಸ್ತ್ರಚಿಕಿತ್ಸೆ ಮೂಲಕ ಕೈ, ಸಕ್ಸಾನ್ ಮತ್ತು ಡಾಮಿಯನ್ ಎನ್ನುವ ತ್ರಿವಳಿ ಗಂಡು ಮಕ್ಕಳಿಗೆ ತಂದೆ-ತಾಯಿ ಆದರು. ಇದಾಗಿ 2 ವರ್ಷಗಳ ನಂತರ 2008ರಲ್ಲಿ ಎಲಾನ್ ಮಸ್ಕ್ ಹಾಗೂ ಜಸ್ಟಿನ್ ವಿಲ್ಸನ್ ವಿಚ್ಛೇದನ ಪಡೆದುಕೊಂಡರು.
ಮಸ್ಕ್ ಗೆ 2ನೇ ಸಂಗಾತಿಯಾದ ಸಿಂಗರ್ ಗ್ರಿಮ್ಸ್..!
ಮೊದಲನೆ ಪತ್ನಿ ಜಸ್ಟಿನ್ ವಿಲ್ಸನ್ನಿಂದ ದೂರ ಆದಮೇಲೆ ಎಲಾನ್ ಮಸ್ಕ್ ಸಿಂಗರ್ ಗ್ರಿಮ್ಸ್ ಜೊತೆ ನಂಟು ಬೆಳೆಸಿ ಕೊಂಡರು. ಎರಡನೇ ಸಂಗಾತಿ ಗ್ರಿಮ್ಸ್ ಮೂರು ಮಕ್ಕಳಿಗೆ ತಾಯಿ ಆದರು. ಮೊದಲ ಎರಡು ಗಂಡು ಮಕ್ಕಳಿಗೆ AE ಹಾಗೂ 12 ಅನ್ನೋ ಅಡ್ಡ ಹೆಸರು ಇಟ್ಟರು. 2022ರಲ್ಲಿ ಎಲಾನ್ ಮಸ್ಕ್ ಹಾಗೂ ಗ್ರಿಮ್ಸ್ ಸೆರ್ಗೂಸಿ ಮೂಲಕ ಮೊದಲ ಹೆಣ್ಣು ಮಗುವನ್ನ ಬರಮಾಡಿಕೊಂಡರು. ಒಂದು ಸಂದರ್ಶನದಲ್ಲಿ ಎಲಾನ್ ಮಸ್ಕ್ ನನ್ನ ಗೆಳೆಯ ಎಂದು ಹೇಳಿಕೊಂಡಿದ್ದ ಗ್ರಿಮ್ಸ್, ಟ್ವಿಟರ್ನಲ್ಲಿ ಇಬ್ಬರು ಬೇರೆ ಬೇರೆ ಆಗಿರುವುದಾಗಿ ತಿಳಿಸಿದ್ದರು.
ಮೂರನೇ ಸಂಗಾತಿಗೆ ನಾಲ್ಕು ಮುದ್ದಾದ ಮಕ್ಕಳು..!
2021.. ನವೆಂಬರ್ನಿಂದ ಎಲಾನ್ ಮಸ್ಕ್ ಹಾಗೂ ಶಿವೊನ್ ಜಲಿಸ್ ಅವರ ಸಂಬಂಧ ಶುರುವಾಯಿತು. ಸ್ಟ್ರೈಡರ್ ಹಾಗೂ ಅಜುರೆ ಎನ್ನುವ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಕಳೆದ ವರ್ಷ ಮತ್ತೊಂದು ಮಗುವಿಗೆ ಶಿವೊನ್ ಜಿಲಿಸ್ ತಾಯಿ ಆದರು. ಎಲಾನ್ ಮಸ್ಕ್ ಅವರಿಗೆ ಈ ಹೆಣ್ಣು ಮಗು 12ನೇ ಮಕ್ಕಳಾಗಿದೆ. ಮೂರನೇ ಅರ್ಕಾಡಿಯಳ ಮೊದಲನೇ ವರ್ಷದ ಹುಟ್ಟುಹಬ್ಬದಂದು ನಾಲ್ಕನೇ ಮಗುವಿನ ವಿಚಾರವನ್ನು ತಿಳಿಸಿದ್ದಾರೆ. 14ನೇ ಮಗುವಿಗೆ ತಂದೆ- ತಾಯಿ ಆಗಿರೋ ಈ ದಂಪತಿ ಸೆಲ್ಡನ್ ಲೈಕರ್ಗಿಸ್ ಎಂದು ನಾಮಕರಣ ಮಾಡಿದ್ದಾರೆ.
ಲೇಖಕಿ ಜೊತೆ ನಂಟು.. 13ನೇ ಮಗುಗೆ ತಂದೆ..!
ಆಶ್ಲೆ ಸೆಂಟ್ ಕ್ಲೇರ್ ಎಂಬ ಲೇಖಕಿ ತಮ್ಮ ಎಕ್ಸ್ ಖಾತೆಯಲ್ಲಿ ಸ್ಫೋಟಕ ಸುದ್ದಿಯೊಂದನ್ನು ಬರೆದುಕೊಂಡಿದ್ದರು. ಕೆಲವು ತಿಂಗಳ ಹಿಂದೆ ನಾನು ಹಾಗೂ ಎಲಾನ್ ಮಸ್ಕ್ ಮಗುವಿನ್ನ ವೆಲ್ಕಮ್ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು. ಇದು ನಿಜವಾಗಿದ್ದರೆ ಎಲಾನ್ ಮಸ್ಕ್ ಅವರಿಗೆ 13ನೇ ಮದು ಇದಾಗಲಿದೆ. ಇದರ ಬಗ್ಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿಲ್ಲ. ಆಶ್ಲೆ ಸೆಂಟ್ ಕ್ಲೇರ್ ಮಾತನ್ನು ತಿರಸ್ಕರಿಸಿಯೂ ಇಲ್ಲ.
ಆಗರ್ಭ ಸಂಪತ್ತಿನ ಜೊತೆಗೆ ಸಂತಾನದ ವಿಚಾರದಲ್ಲೂ ಎಲಾನ್ ಮಸ್ಕ್ ಸುದ್ದಿ ಆಗುತ್ತಿದ್ದಾರೆ. ತಾವು ಕಟ್ಟಿಕೊಂಡಿರೋ ದೊಡ್ಡ ಕುಟುಂಬವನ್ನ ಒಂದೇ ಸೂರಿನೊಳಗೆ ಸೇರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ 14,400 ಚದರ ಅಡಿಯ ಭವ್ಯ ಬಂಗಲೆ ನಿರ್ಮಿಸುತ್ತಿದ್ದಾರೆ ಎಂದು ವರದಿಯಾಗಿದೆ. ಎಲಾನ್ ಮಸ್ಕ್ ಎಲ್ಲಾ ಮಕ್ಕಳು ಮತ್ತು ಮಕ್ಕಳ ತಾಯಂದಿರು ಒಟ್ಟಿಗೆ ನೆಲೆಸಲಿದ್ದಾರೆ. ತಮ್ಮ ನೆಚ್ಚಿನ ಮಡದಿಯರು ಹಾಗೂ ತಮ್ಮ ಮಕ್ಕಳ ಸೈನ್ಯದೊಂದಿಗೆ ಎಲಾನ್ ಮಸ್ಕ್ ಕಾಲ ಕಳೆಯುವ ಯೋಜನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.