ವಾಷಿಂಗ್ಟನ್: ಜಗತ್ತನ್ನೇ ಬೆಚ್ಚಿಬೀಳಿಸುವ ಬೆಳವಣಿಗೆಯೊಂದರಲ್ಲಿ, ದಕ್ಷಿಣ ಅಮೆರಿಕಾದ ತೈಲ ಸಮೃದ್ಧ ರಾಷ್ಟ್ರ ವೆನೆಜುವೆಲಾದ ಮೇಲೆ ಅಮೆರಿಕದ ವಿಶೇಷ ಪಡೆಗಳು (Special Forces) ಹಠಾತ್ ದಾಳಿ ನಡೆಸಿವೆ. ಈ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕ ಪಡೆಗಳು ವಶಕ್ಕೆ ಪಡೆದಿವೆ. ಈ ಘಟನೆಯ ಬೆನ್ನಲ್ಲೇ ಫ್ಲೋರಿಡಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಿಯಾದ ಪರಿವರ್ತನೆ ಜಾರಿಗೆ ಬರುವವರೆಗೆ ಅಮೆರಿಕವೇ ವೆನೆಜುವೆಲಾವನ್ನು ಆಡಳಿತ ನಡೆಸಲಿದೆ ಎಂದು ಘೋಷಿಸಿದ್ದಾರೆ.
ಮಿಂಚಿನ ಕಾರ್ಯಾಚರಣೆ
ಶನಿವಾರ ಬೆಳಗಿನ ಜಾವ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಈ ದಾಳಿ ನಡೆದಿದೆ. ಸಾಲು ಸಾಲು ಸ್ಫೋಟಗಳು ಮತ್ತು ವಿಮಾನಗಳ ಅಬ್ಬರದ ನಡುವೆ ಅಮೆರಿಕದ ಪಡೆಗಳು ವೆನೆಜುವೆಲಾದ ಅತ್ಯಂತ ಸುರಕ್ಷಿತ ಮಿಲಿಟರಿ ಸಂಕೀರ್ಣ ‘ಫೋರ್ಟ್ ಟಿಯುನಾ’ ಒಳಗೆ ನುಗ್ಗಿವೆ. ಅಲ್ಲಿನ ನಿವಾಸದಲ್ಲಿದ್ದ ಮಡುರೊ ದಂಪತಿಯನ್ನು ಅಪಹರಿಸಿದ ಅಮೆರಿಕದ ವಿಶೇಷ ಪಡೆಗಳು, ಅವರನ್ನು ತಕ್ಷಣವೇ ಯುಎಸ್ ನೌಕಾ ಹಡಗಿಗೆ ಸ್ಥಳಾಂತರಿಸಿವೆ.
ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಮಡುರೊ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಡುರೊ ಕೈಕೋಳ ಧರಿಸಿ, ಕಣ್ಣಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿ ಅಮೆರಿಕದ ಯುದ್ಧನೌಕೆಯಾದ ‘ಯುಎಸ್‌ಎಸ್ ಐವೊ ಜಿಮಾ’ದಲ್ಲಿ ಕುಳಿತಿರುವುದು ಕಂಡುಬಂದಿದೆ. ಮಡುರೊ ಮೇಲೆ ಮಾದಕ ವಸ್ತು-ಭಯೋತ್ಪಾದನಾ ಪಿತೂರಿಯ ಹೊಸ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
ಟ್ರಂಪ್ ಮುಂದಿನ ನಡೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ವೆನೆಜುವೆಲಾದ ಆಡಳಿತವನ್ನು ಅಮೆರಿಕವೇ ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು. ನಾವು ದೇಶವನ್ನು ಸುರಕ್ಷಿತವಾಗಿಸುವವರೆಗೆ ನಾವೇ ನಡೆಸುತ್ತೇವೆ. ಅನ್ಯ ರಾಷ್ಟ್ರಗಳ ಹಸ್ತಕ್ಷೇಪ ನಮಗೆ ಇಷ್ಟವಿಲ್ಲ ಎಂದು ಹೇಳಿಕೆ ನೀಡಿದೆ. ಅಲ್ಲದೆ, ವೆನೆಜುವೆಲಾದ ಧ್ವಂಸಗೊಂಡಿರುವ ತೈಲ ಮೂಲಸೌಕರ್ಯವನ್ನು ಅಮೆರಿಕದ ಕಂಪನಿಗಳು ಪುನರ್ನಿರ್ಮಾಣ ಮಾಡಲಿವೆ ಮತ್ತು ದೇಶವನ್ನು ಮತ್ತೆ ಶ್ರೀಮಂತಗೊಳಿಸಲಿವೆ ಎಂದು ಅವರು ಭರವಸೆ ನೀಡಿದರು.
ಆದರೆ, ಈ ಆಡಳಿತ ಎಷ್ಟು ಕಾಲ ಇರುತ್ತದೆ ಅಥವಾ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇದನ್ನು ಹೇಗೆ ಮಾನ್ಯ ಮಾಡಲಾಗುತ್ತದೆ ಎಂಬ ಬಗ್ಗೆ ಟ್ರಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಮೆರಿಕದ ಈ ನಡೆಯು ಜಾಗತಿಕ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.





