ನವದೆಹಲಿ: ಟಿಬೆಟಿಯನ್ನರ ಆರಾಧ್ಯ ದೈವವಾಗಿರುವ 14ನೇ ದಲೈ ಲಾಮಾ ತಮ್ಮ 90ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗಲೇ ದಿಟ್ಟ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. 600 ವರ್ಷಗಳಷ್ಟು ಹಳೆಯದಾದ ಟಿಬೆಟಿನ ಧಾರ್ಮಿಕ ಸಂಸ್ಥೆಯಾದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ ತಮ್ಮ ಮರಣದ ನಂತರವೂ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಇದರ ಜೊತೆಗೆ, 15ನೇ ದಲೈ ಲಾಮಾರ ಆಯ್ಕೆಯನ್ನು ಈ ಸಂಸ್ಥೆಯೇ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದಲೈ ಲಾಮಾ ತಮ್ಮ ಹೇಳಿಕೆಯಲ್ಲಿ, “ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಮಾತ್ರ 15ನೇ ದಲೈ ಲಾಮಾ ಅವರಿಗೆ ಅಧಿಕೃತ ಮಾನ್ಯತೆ ನೀಡಲಿದೆ. ಚೀನಾದ ಯಾವುದೇ ಹಸ್ತಕ್ಷೇಪ ಫಲಿಸುವುದಿಲ್ಲ” ಎಂದು ದೃಢವಾಗಿ ಹೇಳಿದ್ದಾರೆ. ಜುಲೈ 6ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ದಲೈ ಲಾಮಾ ಅವರ ಈ ಘೋಷಣೆಯು, ವಿಶ್ವಾದ್ಯಂತ ಇರುವ ಲಕ್ಷಾಂತರ ಬೌದ್ಧ ಅನುಯಾಯಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.
ಚೀನಾಕ್ಕೆ ದಲೈ ಲಾಮಾ ಎಚ್ಚರಿಕೆ
ಈ ಹೇಳಿಕೆಯು ಟಿಬೆಟಿನ್ನಿಯರ ಧಾರ್ಮಿಕ ಸಂಪ್ರದಾಯಗಳ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಚೀನಾಕ್ಕೆ ಒಂದು ದೊಡ್ಡ ಸಂದೇಶವಾಗಿದೆ. 1959ರಲ್ಲಿ ಲಾಸಾದಲ್ಲಿ ಚೀನಾದ ಆಳ್ವಿಕೆಯ ವಿರುದ್ಧ ವಿಫಲವಾದ ಹೋರಾಟದ ನಂತರ ಭಾರತಕ್ಕೆ ಆಗಮಿಸಿದ ದಲೈ ಲಾಮಾ, ಆ ದಿನದಿಂದ ತಮ್ಮ ಸಾವಿರಾರು ಟಿಬೆಟಿಯನ್ ಅನುಯಾಯಿಗಳೊಂದಿಗೆ ದೇಶಭ್ರಷ್ಟರಾಗಿ ಭಾರತದ ಧರ್ಮಶಾಲೆಯಲ್ಲಿ ವಾಸಿಸುತ್ತಿದ್ದಾರೆ. ಚೀನಾದ ಸರ್ಕಾರವು ದಲೈ ಲಾಮಾರನ್ನು ಪ್ರತ್ಯೇಕತಾವಾದಿ ಮತ್ತು ಬಂಡುಕೋರ ಎಂದು ಕರೆಯುತ್ತದೆ. ಆದರೆ ದಲೈ ಲಾಮಾ ಅವರ ಶಾಂತಿಯುತ ಹೋರಾಟದ ಸಂದೇಶವು ಜಾಗತಿಕವಾಗಿ ಗೌರವವನ್ನು ಗಳಿಸಿದೆ.
ಚೀನಾದ ಸರ್ಕಾರವು ಟಿಬೆಟಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸುವ ಪ್ರಯತ್ನದಲ್ಲಿದೆ. ದಲೈ ಲಾಮಾ ಅವರ ಉತ್ತರಾಧಿಕಾರಿಯ ಆಯ್ಕೆಯಲ್ಲಿ ತನ್ನ ಪಾತ್ರವನ್ನು ವಹಿಸಲು ಚೀನಾ ಯೋಜನೆ ಮಾಡುತ್ತಿರುವ ಶಂಕೆಯಿದೆ. ಆದರೆ, ದಲೈ ಲಾಮಾರ ಈ ಘೋಷಣೆಯು ಚೀನಾದ ಈ ಯೋಜನೆಗೆ ಸವಾಲಾಗಿದೆ. ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ನ ಆಯ್ಕೆಯ ಪ್ರಕ್ರಿಯೆಯು ಶತಮಾನಗಳಿಂದಲೂ ಟಿಬೆಟಿನ ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿರುತ್ತದೆ ಎಂದು ದಲೈ ಲಾಮಾ ಹೇಳಿದ್ದಾರೆ.





