ಬೀಜಿಂಗ್: ಚೀನಾ ತನ್ನ ನಾಗರಿಕರಿಗೆ ಬಾಂಗ್ಲಾದೇಶದ ಜನರೊಂದಿಗೆ ಯಾವುದೇ ರೀತಿಯ ಡೇಟಿಂಗ್ ಅಥವಾ ಮದುವೆ ಸಂಬಂಧವನ್ನು ಹೊಂದಬಾರದೆಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ. ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಮತ್ತು ಮಧ್ಯಂತರ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ಅವರ ರಾಜೀನಾಮೆಯ ಕುರಿತಾದ ಚರ್ಚೆಗಳ ನಡುವೆ ಚೀನಾ ಈ ಕ್ರಮಕ್ಕೆ ಮುಂದಾಗಿದೆ. ಈ ಆದೇಶದ ಮೂಲಕ ಚೀನಾದ ನಾಗರಿಕರು ಯಾವುದೇ ವಿದೇಶಿ ಪುರುಷ/ಮಹಿಳೆಯನ್ನು ಮದುವೆಯಾಗದಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚೀನಾ ಸರ್ಕಾರ ಒತ್ತಾಯಿಸಿದೆ.
ಚೀನಾದ ರಾಯಭಾರ ಕಚೇರಿಯು ಭಾನುವಾರ ರಾತ್ರಿಯೇ ಈ ಸಲಹೆಯನ್ನು ತನ್ನ ನಾಗರಿಕರಿಗೆ ನೀಡಿದೆ. ವರದಿಯ ಪ್ರಕಾರ, ಚೀನಾದ ಪ್ರಜೆಗಳು ಅಕ್ರಮ ಮ್ಯಾಚ್‌ಮೇಕಿಂಗ್ ಏಜೆಂಟ್‌ಗಳಿಗೆ ಬಲಿಯಾಗಬಾರದು, ವಿದೇಶಿ ಪತ್ನಿಯರ ಆಕರ್ಷಣೆಗೆ ಒಳಗಾಗಬಾರದು ಮತ್ತು ಡೇಟಿಂಗ್ ಆಪ್‌ಗಳಿಂದ ಜಾಗರೂಕರಾಗಿರಬೇಕೆಂದು ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಬಾಂಗ್ಲಾದೇಶದವರೊಂದಿಗೆ ಮದುವೆ ಅಥವಾ ಸಂಬಂಧಕ್ಕೆ ಮುನ್ನ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ. ಚೀನಾದ ನಾಗರಿಕರು ಯಾವುದೇ ರೀತಿಯ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಈ ಆದೇಶದ ಹಿಂದಿನ ಪ್ರಮುಖ ಕಾರಣವೆಂದರೆ ಮಾನವ ಕಳ್ಳಸಾಗಣೆಯ ಆತಂಕ. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟಿನಿಂದಾಗಿ ಅನೇಕರು ದೇಶ ತೊರೆಯುವ ಯೋಜನೆಯಲ್ಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ. ಬಾಂಗ್ಲಾದೇಶದ ಪ್ರಜೆಗಳು ವಿದೇಶಿಯರನ್ನು ಮದುವೆಯಾಗುವ ಮೂಲಕ ಅಕ್ರಮವಾಗಿ ಗಡಿ ದಾಟುತ್ತಿದ್ದಾರೆ ಎಂಬ ವರದಿಗಳು ಹೆಚ್ಚಾಗಿವೆ. ಇದರಿಂದ ಮಾನವ ಕಳ್ಳಸಾಗಣೆಯ ಪ್ರಕರಣಗಳು ಹೆಚ್ಚಾಗಿದ್ದು, ಚೀನಾ ತನ್ನ ನಾಗರಿಕರನ್ನು ಎಚ್ಚರಿಕೆಗೊಳಿಸಿದೆ. ಬಾಂಗ್ಲಾದೇಶದವರೊಂದಿಗಿನ ಅಕ್ರಮ ಗಡಿಯಾಚೆಗಿನ ವಿವಾಹಗಳಲ್ಲಿ ಭಾಗಿಯಾದವರನ್ನು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗುವುದು ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.
ಇದೇ ವೇಳೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ಅವರು, “ನಾನು ಎಂದಿಗೂ ಅಧಿಕಾರಕ್ಕಾಗಿ ದೇಶವನ್ನು ಮಾರಿಲ್ಲ. ದೇಶವನ್ನು ಉಳಿಸಲು ಗಡಿಪಾರು ಅನಿವಾರ್ಯವಾಗಿತ್ತು. ಯೂನುಸ್ ಅಧಿಕಾರಕ್ಕೆ ಬರಲು ಭಯೋತ್ಪಾದಕ ಸಂಘಟನೆಗಳನ್ನು ಬಳಸಿಕೊಂಡಿದ್ದಾರೆ,” ಎಂದು ಆರೋಪಿಸಿದ್ದಾರೆ. ತಮ್ಮ ಸರ್ಕಾರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು, ಆದರೆ ಈಗ ಜೈಲುಗಳು ಖಾಲಿಯಾಗಿವೆ ಎಂದು ಹಸೀನಾ ಹೇಳಿದ್ದಾರೆ.





