ಢಾಕಾ: 2024ರ ಜುಲೈ–ಆಗಸ್ಟ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ಸಂಭವಿಸಿದ್ದ ಭಾರೀ ದಂಗೆ ಮತ್ತು ಹಿಂಸಾಚಾರದ ಪ್ರಕರಣದಲ್ಲಿ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅಪರಾಧಿ ಎಂದು ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಸೋಮವಾರ ಮಹತ್ವದ ತೀರ್ಪು ನೀಡಿದೆ. ಮಾನವೀಯತೆಯ ವಿರುದ್ಧದ ಅಪರಾಧ, ಹಿಂಸಾಚಾರಕ್ಕೆ ನೇರ ಮತ್ತು ಪರೋಕ್ಷ ಪ್ರಚೋದನೆ, ಕೊಲೆಗಳಿಗೆ ಆದೇಶ ಮತ್ತು ನ್ಯಾಯವನ್ನು ತಡೆಯಲು ಮಾಡಿದ ಪ್ರಯತ್ನ ಎಂಬ ಆರೋಪಗಳಲ್ಲಿ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಇದೆ ವೇಳೆ, ಹಸೀನಾ ಸರ್ಕಾರದ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಕೂಡ ಇದೇ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದು, ಅವರಿಗೆ ಸಹ ಮರಣದಂಡನೆ ಘೋಷಿಸಲಾಗಿದೆ. ಆದರೆ, ಮಾಜಿ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್–ಮಾಮುನ್ ಅವರನ್ನು ಗಲ್ಲು ಶಿಕ್ಷೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರ ಮೇಲಿನ ಪುರಾವೆಗಳ ಕೊರತೆಯನ್ನು ಕೋರ್ಟ್ ಸೂಚಿಸಿದೆ. ಅವರನ್ನು ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.
ನ್ಯಾಯಮಂಡಳಿಯ ತೀರ್ಪಿನ ಪ್ರಕಾರ, ಶೇಖ್ ಹಸೀನಾ ಅವರ ಮೇಲೆ ಇದ್ದ ಪ್ರಮುಖ ಆರೋಪಗಳಿದ್ದು, ನ್ಯಾಯವನ್ನು ತಡೆಹಾಕಿದ್ದಾರೆ. ಕೊಲೆಗಳಿಗೆ ನೇರ ಆದೇಶ ನೀಡಿದ್ದಾರೆ. ದಂಡನಾತ್ಮಕ ಹತ್ಯೆಗಳನ್ನು ತಡೆಗಟ್ಟಲು ಯಾವ ಕ್ರಮವನ್ನೂ ತೆಗೆದುಕೊಳ್ಳದೆ ವಿಫಲರಾದರು. ಈ ಮೂರು ಗಂಭೀರ ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತುಪಡಿಸಿದ್ದಾರೆ. ಈ ಮೂರು ಆರೋಪಗಳಿಗೆ ಸಂಬಂಧಿಸಿದ ಸಾಕ್ಷಿಗಳು, ಸಾಕ್ಷಿದಾರರ ಹೇಳಿಕೆಗಳು ಮತ್ತು ರಾಷ್ಟ್ರ-ಅಂತರಾಷ್ಟ್ರೀಯ ವರದಿಗಳ ಆಧಾರದಲ್ಲಿ ಹಸೀನಾ ವಿರುದ್ಧದ ಅಪರಾಧ ಪಕ್ಕಾ ಎಂದು ಪೀಠ ಸ್ಪಷ್ಟಪಡಿಸಿದೆ.
ಜುಲೈ–ಆಗಸ್ಟ್ 2024ರಲ್ಲಿ ಬಾಂಗ್ಲಾದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಈ ಅವಧಿಯಲ್ಲಿ ಸುಮಾರು 1,400 ಜನರು ಸಾವನ್ನಪ್ಪಿ, 24,000 ಜನರು ಗಾಯಗೊಂಡಿದ್ದರು ಎಂದು ICT ನ್ಯಾಯಾಧೀಶರು ಉಲ್ಲೇಖಿಸಿದರು.
ನ್ಯಾಯಮಂಡಳಿಯ ಪ್ರಕಾರ, ಹಸೀನಾ ಅವರು ಪ್ರತಿಭಟನಾಕಾರರನ್ನು ‘ರಜಾಕರ್’ ಎಂದು ಕರೆಯುವ ಮೂಲಕ ಜನರ ವಿರುದ್ಧ ದ್ವೇಷ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು. ಈ ಎಲ್ಲಾ ಕೃತ್ಯಗಳ ಹಿಂದಿನ “ಮಾಸ್ಟರ್‌ಮೈಂಡ್” ಮತ್ತು “ಪ್ರಮುಖ ರೂವಾರಿ” ಶೇಖ್ ಹಸೀನಾ ಎಂದು ನ್ಯಾಯಾಲಯ ಸ್ಪಷ್ಟವಾಗಿ ಘೋಷಿಸಿದೆ.





