ಇರಾನ್ ಹಾಗೂ ಇಸ್ರೇಲ್–ಅಮೆರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಇದೀಗ ಗಲ್ಫ್ ವಲಯವನ್ನೇ ಕದಡುವ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಹಲವು ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆಯೆಂದು ಹೇಳಿಕೊಂಡಿದೆ. ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ಹಾಗೂ ಯುಎಇ ಭಾಗಗಳಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್, ಬಹ್ರೇನ್‌ನ ಮನಾಮಾ, ಕತಾರ್‌ನ ದೋಹಾ ಹಾಗೂ ಯುಎಇಯ ದುಬೈ, ಅಬುಧಾಬಿ ಪ್ರದೇಶಗಳಲ್ಲಿ ಭೀಕರ ಸ್ಫೋಟಗಳ ವರದಿ ಹರಿದಾಡುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಕುಟುಂಬಗಳು ಆತಂಕಕ್ಕೊಳಗಾಗಿವೆ. ಅಧಿಕೃತ ದೃಢೀಕರಣಗಳಿಗಾಗಿ ವಿಶ್ವದ ನಾಯಕರು ಮತ್ತು ಭದ್ರತಾ ಸಂಸ್ಥೆಗಳು ಕಾದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಈ ಘಟನೆಗಳ ನಡುವೆ ಬಲ್ಗೇರಿಯಾದ ಅಂಧ ಭವಿಷ್ಯವಾಣಿ ಹೇಳಿದವರಾದ ಬಾಬಾ ವಂಗಾ ಅವರ 2026ರ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಅವರು 2026ರಲ್ಲಿ “ಮೂರನೇ ಮಹಾಯುದ್ಧ” ಪ್ರಾರಂಭವಾಗಬಹುದು ಎಂದು ಹೇಳಿದ್ದರು ಎಂಬ ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಶೇಷವಾಗಿ ಪೂರ್ವ ಭಾಗದಲ್ಲಿ ಭುಗಿಲೆದ್ದ ಯುದ್ಧ ಜಗತ್ತಿನಾದ್ಯಂತ ಹರಡಿ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆಯೆಂದು ಹಲವರು ಉಲ್ಲೇಖಿಸುತ್ತಿದ್ದಾರೆ.
ಮೂರನೇ ಮಹಾಯುದ್ಧ ಆರಂಭವಾಗಿದೆಯೇ?
ಇರಾನ್–ಇಸ್ರೇಲ್ ಉದ್ವಿಗ್ನತೆ, ಅಮೆರಿಕಾ ಹಸ್ತಕ್ಷೇಪ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ “ಇದು ಮೂರನೇ ಮಹಾಯುದ್ಧದ ಆರಂಭವೇ?” ಎಂಬ ಪ್ರಶ್ನೆ ಸಾಮಾನ್ಯರ ಮನಸ್ಸಿನಲ್ಲಿ ಮೂಡಿದೆ. ಯುದ್ಧ ಕ್ರಮೇಣ ಪ್ರಪಂಚದಾದ್ಯಂತ ಹರಡಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ. ಅವರ ಈ ಭವಿಷ್ಯವಾಣಿ ಜನರಲ್ಲಿ ಭಯ ಹುಟ್ಟಿಸಿದೆ.
ರಷ್ಯಾ–ಅಮೆರಿಕಾ ಮುಖಾಮುಖಿ ಭಯ
ಬಾಬಾ ವಂಗಾ ಅವರ ಮತ್ತೊಂದು ಭವಿಷ್ಯವಾಣಿಯಲ್ಲಿ ರಷ್ಯಾ ಮತ್ತು ಅಮೆರಿಕಾ ಮುಂತಾದ ಪ್ರಬಲ ರಾಷ್ಟ್ರಗಳು ಯುದ್ಧ ಎದುರಿಸಬಹುದು ಎಂಬ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಇಂದಿನ ಜಿಯೋಪಾಲಿಟಿಕಲ್ ಪರಿಸ್ಥಿತಿಯಲ್ಲಿ ರಷ್ಯಾ, ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಬಂಧಗಳು ತೀವ್ರವಾಗಿರುವುದು ನಿಜ. ಆದರೆ ಈ ಉದ್ವಿಗ್ನತೆ ನೇರ ಸೈನಿಕ ಮುಖಾಮುಖಿಗೆ ತಲುಪುತ್ತದೆಯೇ ಎಂಬುದನ್ನು ಹೇಳುವುದು ಇನ್ನೂ ಅಕಾಲಿಕ.
ಯುರೋಪ್ ಹೆಚ್ಚು ಹಾನಿಗೊಳಗಾಗಬಹುದು, ಪಶ್ಚಿಮ ಭಾಗದ ಮೇಲೆ ಯುದ್ಧದ ಪರಿಣಾಮ ಬೀರುತ್ತದೆ ಎಂಬ ವಾದಗಳೂ ಹರಿದಾಡುತ್ತಿವೆ. ಇಂಧನ ಸರಬರಾಜು ಮಾರ್ಗಗಳು ಅಸ್ತವ್ಯಸ್ತವಾದರೆ ಯುರೋಪಿನ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬೀಳಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.
ಭವಿಷ್ಯವಾಣಿ ನಿಜವಾಯಿತೇ?
ಪ್ರತಿ ಜಾಗತಿಕ ಸಂಕಷ್ಟದ ಸಂದರ್ಭದಲ್ಲೂ ಬಾಬಾ ವಂಗಾ ಅವರ ಹೆಸರು ಪ್ರಸ್ತಾಪವಾಗುವುದು ಹೊಸದೇನಲ್ಲ. ಆದರೆ ಅವರ ಭವಿಷ್ಯವಾಣಿಗಳು ಸ್ಪಷ್ಟ ದಾಖಲೆಗಳ ಆಧಾರದಲ್ಲಿದೆಯೇ ಅಥವಾ ನಂತರದ ವ್ಯಾಖ್ಯಾನಗಳೇ ಎಂಬ ಪ್ರಶ್ನೆ ಸದಾ ಉದ್ಭವಿಸುತ್ತದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ವಿವಾದಾಸ್ಪದವಾಗಿವೆ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದು ಕೇವಲ ಆಕಸ್ಮಿಕ ಹೋಲಿಕೆಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇದೀಗ ಇರಾನ್-ಇಸ್ರೇಲ್ ಪರಿಸ್ಥಿತಿ ಗಂಭೀರವಾಗಿದ್ದರೂ, ಇದನ್ನು ತಕ್ಷಣವೇ “ಮೂರನೇ ಮಹಾಯುದ್ಧ” ಎಂದು ಕರೆಯುವುದು ಸರಿಯಲ್ಲ ಎಂಬುದು ತಜ್ಞರ ಅಭಿಪ್ರಾಯ. ಅಧಿಕೃತ ಮಾಹಿತಿಗಳು, ರಾಜತಾಂತ್ರಿಕ ಮಾತುಕತೆಗಳು ಹಾಗೂ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಅಂತಿಮ ನಿರ್ಣಯಕ್ಕೆ ಬರಬೇಕಾಗಿದೆ.




