ಡಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಮುಂದುವರಿಯುತ್ತಿವೆ. ದೀಪು ಚಂದ್ರ ದಾಸ್ ಮತ್ತು ಅಮೃತ್ ಮಂಡಲ್ ಅವರ ಭೀಕರ ಹತ್ಯೆಗಳ ಬೆನ್ನಲ್ಲೇ, ಈಗ ಮೈಮೆನ್ಸಿಂಗ್ ಪ್ರಾಂತ್ಯದಲ್ಲಿ ಬಜೇಂದ್ರ ಬಿಸ್ವಾಸ್ (22) ಎಂಬ ಮತ್ತೊಬ್ಬ ಹಿಂದೂ ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ವರದಿಗಳ ಪ್ರಕಾರ, ಮೈಮೆನ್ಸಿಂಗ್‌ನ ಜವಳಿ ಕಾರ್ಖಾನೆಯೊಂದರ ಬಳಿ ಈ ಘಟನೆ ನಡೆದಿದೆ. ಬಜೇಂದ್ರ ಬಿಸ್ವಾಸ್ ಅವರು ಗ್ರಾಮದ ರಕ್ಷಣೆಗಾಗಿ ರಚಿಸಲಾಗಿದ್ದ ಅರೆಸೈನಿಕ ಗುಂಪಿನ ಸಕ್ರಿಯ ಸದಸ್ಯರಾಗಿದ್ದರು. ಕಾರ್ಖಾನೆಯ ಬಳಿ ದೊಡ್ಡ ಜನಸಮೂಹ ಸೇರಿದ್ದಾಗ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ವೇಳೆ ನೋಮನ್ ಮಿಯಾನ್ ಎಂಬ ವ್ಯಕ್ತಿ ಎಲ್ಲರ ಸಮ್ಮುಖದಲ್ಲೇ ಬಜೇಂದ್ರ ಬಿಸ್ವಾಸ್‌ಗೆ ಬಂದೂಕಿನಿಂದ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ಬಜೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಆರೋಪಿ ನೋಮನ್ ಮಿಯಾನ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶದಲ್ಲಿ ಕಳೆದ ಕೆಲವು ವಾರಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳು ಮನುಕುಲವೇ ತಲೆತಗ್ಗಿಸುವಂತಿವೆ. ಇದೇ ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬುವವರನ್ನು ಜವಳಿ ಕಾರ್ಖಾನೆಯಿಂದ ಹೊರಕ್ಕೆ ಎಳೆದು ತಂದು, ಬೀದಿಗಳಲ್ಲಿ ಮನಬಂದಂತೆ ಹೊಡೆದು ಕೊಲೆ ಮಾಡಿದ್ದರು. ಅಷ್ಟಕ್ಕೆ ನಿಲ್ಲದ ಆರೋಪಿಗಳು ಮೃತದೇಹವನ್ನು ಮರಕ್ಕೆ ಕಟ್ಟಿ ಅಡ್ಡರಸ್ತೆಯಲ್ಲಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು. ಘಟನೆ ಮಾಸುವ ಮುನ್ನವೇ ಮಾರುಕಟ್ಟೆಯಲ್ಲಿ ಜನರ ನಡುವೆಯೇ ಅಮೃತ್ ಮಂಡಲ್ ಎಂಬುವವರನ್ನು ಗುಂಪೊಂದು ಹೊಡೆದು ಸಾಯಿಸಿತ್ತು. ಈ ಘಟನೆಗಳು ಅಲ್ಪಸಂಖ್ಯಾತರಲ್ಲಿ ತೀವ್ರ ಭೀತಿಯನ್ನು ಹುಟ್ಟುಹಾಕಿವೆ.
ಅಚ್ಚರಿಯ ವಿಷಯವೆಂದರೆ, ಈ ಸರಣಿ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗಿರುವ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ, ಘಟನೆಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅಮೃತ್ ಮಂಡಲ್ ಹತ್ಯೆಯನ್ನು ‘ಕೋಮು ಹಿಂಸಾಚಾರ’ ಎಂದು ಒಪ್ಪಿಕೊಳ್ಳುವ ಬದಲು, ಅವರನ್ನು ‘ಸುಲಿಗೆಕೋರ’ ಎಂದು ಕರೆದು ಹತ್ಯೆಯನ್ನು ಸಮರ್ಥಿಸಿಕೊಂಡಿತ್ತು.
ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆ ಎಂಬುದು ಬಜೇಂದ್ರ ಬಿಸ್ವಾಸ್ ಹತ್ಯೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ವಿಶ್ವದ ಪ್ರಭಾವಿ ನಾಯಕರು ಈ ಘಟನೆಗಳನ್ನು ಎದುರಿಸುವು ಖಂಡಿಸುತ್ತಿದ್ದರೂ, ಸ್ಥಳೀಯ ಮಟ್ಟದಲ್ಲಿ ದಾಳಿಗಳು ನಿಲ್ಲುತ್ತಿಲ್ಲ. ಈಗ ಮತ್ತೊಬ್ಬ ಹಿಂದೂ ಬಲಿಯಾಗಿದ್ದು, ಯೂನಸ್ ಸರ್ಕಾರ ಈ ಬಾರಿ ಯಾವ ನೆಪ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಅಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಪಸಂಖ್ಯಾತರು ಜೀವ ಭಯದಲ್ಲಿದ್ದಾರೆ.





