ವಾಷಿಂಗ್ಟನ್: ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DEN) ಅಮೆರಿಕನ್ ಏರ್ಲೈನ್ಸ್ (American Airlines) ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಭೀಕರ ಘಟನೆ ನಡೆದಿದೆ. ವಿಮಾನದ ಲ್ಯಾಂಡಿಂಗ್ ಗೇರ್ (ಚಕ್ರ) ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಘಟನೆಯಲ್ಲಿ 173 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸದಸ್ಯರು ಇದ್ದರು. ಅದೃಷ್ಟವಶಾತ್, ಎಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಬಂದಿದ್ದಾರೆ.
ಅಮೆರಿಕನ್ ಏರ್‌ಲೈನ್ಸ್‌ನ ವಿಮಾನ ರನ್‌ವೇ 34Lನಲ್ಲಿ ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ವಿಮಾನದ ಎಡಗಡೆಯ ಹಿಂಭಾಗದ ಚಕ್ರದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ದಟ್ಟವಾದ ಹೊಗೆ ಆವರಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ತುರ್ತು ಸ್ಲೈಡ್‌ಗಳ ಮೂಲಕ ಪ್ರಯಾಣಿಕರು ವಿಮಾನದಿಂದ ಆತಂಕದಿಂದ ಹೊರಬರುತ್ತಿರುವ ದೃಶ್ಯ ಕಾಣಿಸುತ್ತದೆ. ಡೆನ್ವರ್ ಅಗ್ನಿಶಾಮಕ ಇಲಾಖೆಯ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಿಯಂತ್ರಿಸಿದ್ದವು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದವು.
WATCH: People evacuate American Airlines plane at Denver International Airport (DEN) after left main wheels caught fire. Everyone accounted for. pic.twitter.com/CeGL24PRvf
— AZ Intel (@AZ_Intel_) July 26, 2025
ಅಮೆರಿಕನ್ ಏರ್‌ಲೈನ್ಸ್‌ನ ಅಧಿಕೃತ ಹೇಳಿಕೆಯ ಪ್ರಕಾರ, “ವಿಮಾನದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ನಮ್ಮ ನಿರ್ವಹಣಾ ತಂಡವು ವಿಮಾನದ ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ.” ಘಟನೆಯಲ್ಲಿ ಕೆಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಡೆನ್ವರ್ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಘಟನೆಯಿಂದ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ಸಂಭವಿಸಿದ ಇದೇ ರೀತಿಯ ಘಟನೆಯ ನಂತರ, ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿರುವುದು ಆತಂಕಕಾರಿಯಾಗಿದೆ. ವಿಮಾನದ ತಾಂತ್ರಿಕ ಸಮಸ್ಯೆಗಳು, ವಿಶೇಷವಾಗಿ ಲ್ಯಾಂಡಿಂಗ್ ಗೇರ್‌ನ ದೋಷಗಳು, ಈ ರೀತಿಯ ದುರಂತಗಳಿಗೆ ಕಾರಣವಾಗುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.