ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮಿತ್ರಪಡೆಗಳ ನಡುವಿನ ಸಂಘರ್ಷ ಈಗ ಹೊಸ ಆಯಾಮ ಪಡೆದುಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹ್ರೇನ್‌ನಲ್ಲಿರುವ ಪ್ರಮುಖ ಟೆಕ್ ಸಂಸ್ಥೆ ಅಮೆಜಾನ್‌ನ ಡೇಟಾ ಕೇಂದ್ರಗಳ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಸೇವೆಗಳು ವ್ಯತ್ಯಯಗೊಂಡಿವೆ.
ಡೇಟಾ ಕೇಂದ್ರಗಳ ಮೇಲೆ ಅನಿರೀಕ್ಷಿತ ಪ್ರಹಾರ
ಯುಎಇನಲ್ಲಿರುವ ಅಮೆಜಾನ್‌ನ ಎರಡು ಪ್ರಮುಖ ಡೇಟಾ ಕೇಂದ್ರಗಳು ಮತ್ತು ಬಹ್ರೇನ್‌ನ ಒಂದು ಘಟಕದ ಮೇಲೆ ನಡೆದ ಡ್ರೋನ್ ದಾಳಿಯಿಂದಾಗಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ದಾಳಿಯ ತೀವ್ರತೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚೇತರಿಕೆಗೆ ಸುದೀರ್ಘ ಸಮಯ ಹಿಡಿಯಲಿದೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದ್ದರೂ, ಇದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ ಮೂಡಿಸಿದೆ.
ಇಸ್ರೇಲ್ ಪಡೆಗಳು ಇರಾನ್‌ನ ಟೆಹ್ರಾನ್ ಮತ್ತು ಲೆಬನಾನ್‌ನ ಬೈರುತ್ ಮೇಲೆ ಸತತ ದಾಳಿಗಳನ್ನು ಮುಂದುವರಿಸಿವೆ. ಇರಾನ್‌ನ ಸರ್ಕಾರಿ ಪ್ರಸಾರ ಕೇಂದ್ರದ ಮೇಲೆ ನಡೆದ ದಾಳಿಯಿಂದಾಗಿ ಸಾವಿನ ಸಂಖ್ಯೆ 600ರ ಗಡಿ ದಾಟಿದೆ. ಇರಾನ್‌ನ ಇಬ್ಬರು ವಾಯುಪಡೆ ಮತ್ತು ಮೂವರು ನೌಕಾಪಡೆ ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪಶ್ಚಿಮ ಜೆರುಸಲೇಂ ಮತ್ತು ಟೆಲ್ ಅವಿವ್ ಮೇಲೆ ಕ್ಷಿಪಣಿ ಮಳೆಗರೆದಿದ್ದು, ಇಸ್ರೇಲ್‌ನಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ.
ಈ ಯುದ್ದದಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು. ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಈ ಜಲಮಾರ್ಗವನ್ನು ಬಂದ್ ಮಾಡಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರಿವೆ. ದಾಳಿಯ ಭೀತಿಯಿಂದ ಕತಾರ್ ತನ್ನ ಎಲ್‌ಎನ್‌ಜಿ (LNG) ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಟ್ರಂಪ್ ಆಡಳಿತದ ಮೇಲೆ ಒತ್ತಡ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಾಚರಣೆ ಇನ್ನೂ ನಾಲ್ಕು ವಾರ ಮುಂದುವರಿಯಬಹುದು ಎಂದು ಹೇಳಿದ್ದು, ಇರಾನ್‌ನ ಪರಮಾಣು ಸಾಮರ್ಥ್ಯ ನಾಶಪಡಿಸುವುದಾಗಿ ಶಪಥ ಮಾಡಿದ್ದಾರೆ. ಆದರೆ, ಅಮೆರಿಕದ ಒಳಗೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಹೊಸ ಯುದ್ಧ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ ಟ್ರಂಪ್, ಈಗ ಹತ್ತಾರು ಸಾವಿರ ಯೋಧರನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿರುವುದು ಡೆಮಾಕ್ರಟಿಕ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಆರು ಅಮೆರಿಕನ್ ಯೋಧರು ಪ್ರಾಣ ಕಳೆದುಕೊಂಡಿದ್ದು, ಇದು ಟ್ರಂಪ್ ಅವರಿಗೆ ರಾಜಕೀಯವಾಗಿ ಹಿನ್ನಡೆ ತರುವ ಸಾಧ್ಯತೆಯಿದೆ.





