ವಾಷಿಂಗ್ಟನ್ ಆ. 21: ಪಶ್ಚಿಮ ಅಲಾಸ್ಕಾದ ದೂರದ ಮಿಲಿಟರಿ ರಾಡಾರ್ ತಾಣದ ಬಳಿ ಚಾರ್ಟರ್ ವಿಮಾನವೊಂದು ಪತನಗೊಂಡು ವಿಮಾನದಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವದರಿಗಳು ತಿಳಿಸಿದೆ. ನಿನ್ನೆ ಗುರುವಾರ ಮಧ್ಯಾಹ್ನ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರಲ್ಲಿ ಇಬ್ಬರು ಪೈಲಟ್‌ಗಳು ಹಾಗೂ ಆರು ಪ್ರಯಾಣಿಕರು ಸೇರಿದ್ದಾರೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲಾಸ್ಕಾದ ಅತಿದೊಡ್ಡ ನಗರ ಆಂಕಾರೇಜ್‌ನಿಂದ ಸುಮಾರು 450 ಮೈಲು (725 ಕಿ.ಮೀ.) ದೂರದಲ್ಲಿರುವ ಕೇಪ್ ನ್ಯೂವೆನ್‌ಹ್ಯಾಮ್ ಲಾಂಗ್ ರೇಂಜ್ ರಾಡಾರ್ ಸೈಟ್ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡಿದೆ. ಆಂಕಾರೇಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಸೆಸ್ನಾ 441 ವಿಮಾನವು ಕೇಪ್ ನ್ಯೂವೆನ್‌ಹ್ಯಾಮ್‌ಗೆ ತೆರಳುತ್ತಿತ್ತು. ಗಮ್ಯಸ್ಥಾನದ ಸಮೀಪಿಸುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.15ಕ್ಕೆ ಅಪಘಾತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.
ಆಂಕಾರೇಜ್ ಮೂಲದ ಸೆಕ್ಯುರಿಟಿ ಏವಿಯೇಷನ್ ಸಂಸ್ಥೆ ಈ ವಿಮಾನವನ್ನು ನಿರ್ವಹಿಸುತ್ತಿತ್ತು. ಚಾರ್ಟರ್ ವಿಮಾನವು ನಾಗರಿಕ-ಗುತ್ತಿಗೆ ಸೇವೆಯಡಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅಲಾಸ್ಕನ್ ಕಮಾಂಡ್ ತಿಳಿಸಿದೆ. ಅಪಘಾತದ ಮಾಹಿತಿ ಲಭ್ಯವಾದ ಬಳಿಕ ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದವು. ಆದರೆ ವಿಮಾನದಲ್ಲಿದ್ದ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಎಲ್ಲ ಎಂಟು ಮಂದಿ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಲ್ಲಿ ಇಬ್ಬರು ಯುಎಸ್ ಆರ್ಮಿ ಕಾರ್ಪ್ಸ್ ಆಫ್ ಎಂಜಿನಿಯರ್ಸ್ (USACE) ಉದ್ಯೋಗಿಗಳು ಸೇರಿದ್ದಾರೆ. ಮೃತರ ಗುರುತುಗಳನ್ನು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಪ್ ನ್ಯೂವೆನ್‌ಹ್ಯಾಮ್ ರಾಡಾರ್ ತಾಣವು ಅಲಾಸ್ಕಾದ ವಾಯುಪ್ರದೇಶ ಹಾಗೂ ಅದರ ಗಡಿಗಳಲ್ಲಿ ಸಂಚರಿಸುವ ವಿಮಾನಗಳನ್ನು ಪತ್ತೆಹಚ್ಚುವ ದೂರದ ರಾಡಾರ್ ಕೇಂದ್ರಗಳ ಜಾಲದ ಭಾಗವಾಗಿದೆ. ಈ ಪ್ರದೇಶದಲ್ಲಿ ಮಿಲಿಟರಿ ಮತ್ತು ಅನುಮೋದಿತ ಚಾರ್ಟರ್ ವಿಮಾನಗಳಿಗೆ ಮಾತ್ರ ಇಳಿಯಲು ಅವಕಾಶವಿದೆ.
ಅಪಘಾತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಹವಾಮಾನ, ತಾಂತ್ರಿಕ ದೋಷ ಅಥವಾ ಇತರ ಯಾವುದೇ ಕಾರಣವಿದೆಯೇ ಎಂಬುದನ್ನು ತನಿಖೆಯ ಬಳಿಕವೇ ತಿಳಿಯಬೇಕಿದೆ. FAA ಹಾಗೂ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಪ್ರಕರಣದ ತನಿಖೆ ನಡೆಸಲಿದ್ದು, ತನಿಖೆಯ ನೇತೃತ್ವವನ್ನು NTSB ವಹಿಸಲಿದೆ.
ಕೇಪ್ ನ್ಯೂವೆನ್‌ಹ್ಯಾಮ್ ವಿಮಾನ ನಿಲ್ದಾಣದ ರನ್‌ವೇ ಸುಮಾರು 4,000 ಅಡಿ ಉದ್ದವಿದ್ದು, ಸುತ್ತಮುತ್ತ ಎತ್ತರದ ಭೂಪ್ರದೇಶವಿದೆ ಎಂದು FAA ದಾಖಲೆಗಳು ತಿಳಿಸುತ್ತವೆ. ಅಪಘಾತದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ತನಿಖೆ ಮೂಲಕ ದುರಂತದ ನಿಖರ ಕಾರಣ ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ.





