ಸೈಬೀರಿಯಾ, ಅಕ್ಟೋಬರ್ 5: ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ದಾರಿಯಾ ಶಿಪಿಲೋವಾ ಅವರ ಸಾವಿನ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ಲೇಗ್ ರೋಗಾಣುವಿನ ಸೋಂಕಿನ ಶಂಕೆ ವ್ಯಕ್ತವಾಗಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಐದು ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಆದರೆ, ದಾರಿಯಾ ಪ್ಲೇಗ್‌ನಿಂದಲೇ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ರಷ್ಯಾದ ಸ್ಥಳೀಯ ಅಧಿಕಾರಿಗಳ ಹೇಳಿಕೆಗಳಲ್ಲಿ ಈ ಕುರಿತು ವ್ಯತ್ಯಾಸ ಕಂಡುಬಂದಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಪರೀಕ್ಷೆ ಮತ್ತು ತನಿಖೆ ಮುಂದುವರಿದಿದೆ.
ಸಜೀವ ಬ್ಯಾಕ್ಟೀರಿಯಾ ಇದ್ದ ಟೆಸ್ಟ್ ಟ್ಯೂಬ್ ಒಡೆದಿತ್ತೇ?
ದಾರಿಯಾ ಶಿಪಿಲೋವಾ ಅವರು ಇರ್ಕುಟ್ಸ್ ಪ್ರದೇಶದ ಶೆಲೆಖೋವ್‌ನಲ್ಲಿರುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಯೋಗಾಲಯದಲ್ಲಿ ಸ್ಯಾಂಪಲ್ ಸಂಗ್ರಹಿಸುವ ಸಂದರ್ಭದಲ್ಲಿ ಸಜೀವ ಬ್ಯಾಕ್ಟೀರಿಯಾಗಳಿದ್ದ ಟೆಸ್ಟ್ ಟ್ಯೂಬ್ ಆಕಸ್ಮಿಕವಾಗಿ ಒಡೆದಿತ್ತು ಎಂದು ಅವರು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಘಟನೆ ಬಳಿಕ ದಾರಿಯಾ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ. ಸೆಪ್ಟೆಂಬರ್ 29ರಂದು ತೀವ್ರ ಉಸಿರಾಟದ ತೊಂದರೆ ಮತ್ತು ನ್ಯುಮೋನಿಯಾ ಲಕ್ಷಣಗಳ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆ ವೆಂಟಿಲೇಟರ್ ಸಹಾಯ ನೀಡಲಾಗಿತ್ತು. ಆದರೆ ಅಕ್ಟೋಬರ್ 1ರಂದು ಅವರು ಮೃತಪಟ್ಟಿದ್ದಾರೆ.
ಈ ಸಾವಿನ ಹಿನ್ನೆಲೆ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ಮೃತರೊಂದಿಗೆ ಸಂಪರ್ಕದಲ್ಲಿದ್ದವರ ಆರೋಗ್ಯದ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ.
200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್
ಮುನ್ನೆಚ್ಚರಿಕಾ ಕ್ರಮವಾಗಿ ದಾರಿಯಾ ಅವರು ಸಂಪರ್ಕದಲ್ಲಿದ್ದ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಸೋಂಕು ಹರಡುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಇರ್ಕುಟ್ಸ್ ನಗರದಲ್ಲಿ ಸಾರ್ವಜನಿಕ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂಬ ವರದಿಗಳಿವೆ. ಐದು ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದಾಗಿ ನೀಡಿರುವ ಮಾಹಿತಿಯೂ ಆತಂಕಕ್ಕೆ ಕಾರಣವಾಗಿದೆ.
‘ಇದು ಪ್ಲೇಗ್ ಅಲ್ಲ, ನ್ಯುಮೋನಿಯಾ’
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇರ್ಕುಟ್ಸ್ ಗವರ್ನರ್ ಇಗೋರ್ ಕೊಬ್ಲೆವ್ ಅವರ ಪ್ರಕಾರ, ಮೃತರ ಮಾದರಿಗಳನ್ನು ಪರೀಕ್ಷಿಸಿದಾಗ ಅವರ ವೃತ್ತಿಗೆ ಸಂಬಂಧಿಸಿದ ಯಾವುದೇ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ.
ಅವರ ಪ್ರಕಾರ, ದಾರಿಯಾ ಅವರ ಸಾವಿಗೆ ಅಜ್ಞಾತ ಕಾರಣದ ನ್ಯುಮೋನಿಯಾ ಕಾರಣವಾಗಿರಬಹುದು. ಅಲ್ಲದೆ, ಸಂಶೋಧನಾ ಸಂಸ್ಥೆಯ ಇತರ ಉದ್ಯೋಗಿಗಳಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಪ್ಲೇಗ್ ಸೋಂಕು ಹರಡಿದೆ ಎಂಬ ಆತಂಕಕ್ಕೆ ಸದ್ಯಕ್ಕೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮತ್ತೊಬ್ಬ ಗವರ್ನರ್ ಹೇಳಿಕೆ ಗೊಂದಲಕ್ಕೆ ಕಾರಣ
ನೆರೆಯ ಬುರ್ಯಾಟಿಯಾ ಪ್ರದೇಶದ ಗವರ್ನರ್ ಅಲೆಕ್ಸಿ ಟ್ರೈಡೆನೋವ್ ಅವರು ದಾರಿಯಾ ಪ್ಲೇಗ್‌ನಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಎರಡು ವಿಭಿನ್ನ ಹೇಳಿಕೆಗಳು ಹೊರಬಂದಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಗೊಂದಲವೂ ಉಂಟಾಗಿದೆ.
ಪ್ಲೇಗ್ ಎಂಬುದು Yersinia pestis ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಭೀರ ಸಾಂಕ್ರಾಮಿಕ ರೋಗ. ಆದರೆ ಪ್ರಸ್ತುತ ಪ್ರಕರಣದಲ್ಲಿ ಈ ಸೋಂಕು ದೃಢಪಟ್ಟಿದೆ ಎಂದು ಹೇಳಲು ಅಂತಿಮ ಪರೀಕ್ಷಾ ವರದಿಗಳು ಅಗತ್ಯವಾಗಿವೆ.
ಅಧಿಕಾರಿಗಳಿಂದ ಕಟ್ಟುನಿಟ್ಟಿನ ನಿಗಾ
ಪ್ರಕರಣದ ಹಿನ್ನೆಲೆ ರಷ್ಯಾದ ಗ್ರಾಹಕ ಸುರಕ್ಷತಾ ಸಂಸ್ಥೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎನ್ನಲಾಗಿದೆ. ಕ್ವಾರಂಟೈನ್‌ನಲ್ಲಿರುವವರ ಆರೋಗ್ಯ ಸ್ಥಿತಿ, ಸಂಶೋಧನಾ ಸಂಸ್ಥೆಯ ಸಿಬ್ಬಂದಿಯ ಆರೋಗ್ಯ ಹಾಗೂ ಮೃತರ ಮಾದರಿಗಳ ಪರೀಕ್ಷೆಯ ಫಲಿತಾಂಶಗಳ ಮೇಲೆ ಅಧಿಕಾರಿಗಳ ಗಮನ ಕೇಂದ್ರೀಕೃತವಾಗಿದೆ.





