ಮೈಸೂರು: ಖಾಸಗಿ ಶಾಲೆಯೊಂದರಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಗಂಭೀರ ಆರೋಪ ಮೈಸೂರಿನಲ್ಲಿ ಕೇಳಿ ಬಂದಿದೆ. ಶಿಕ್ಷಕರೊಬ್ಬರು ವಿದ್ಯಾರ್ಥಿಯ ಕಣ್ಣಿನ ಭಾಗಕ್ಕೆ ಮುಷ್ಟಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆಯಿಂದ ವಿದ್ಯಾರ್ಥಿಯ ಕಣ್ಣಿನಲ್ಲಿ ಗಾಯ ಹಾಗೂ ರಕ್ತ ಹೆಪ್ಪುಗಟ್ಟಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೈಸೂರಿನ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 16 ವರ್ಷದ ವಿದ್ಯಾರ್ಥಿಯ ಕಣ್ಣಿನ ಭಾಗಕ್ಕೆ ಶಿಕ್ಷಕ ಸುರೇಶ್ ಎಂಬವರು ಪಂಚ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಿಕ್ಷಕರ ಹಲ್ಲೆಯಿಂದ ವಿದ್ಯಾರ್ಥಿಯ ಕಣ್ಣಿಗೆ ಗಾಯವಾಗಿದ್ದು, ಬಳಿಕ ಆತ ಮನೆಗೆ ತೆರಳಿ ನಡೆದ ಘಟನೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಆರೋಪ
ಶಿಕ್ಷಕರ ಮುಷ್ಟಿಯಿಂದ ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದ ಪರಿಣಾಮ ವಿದ್ಯಾರ್ಥಿಯ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು, ಸದ್ಯ ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿರುವ ವಿಚಾರ ಬೆಳಕಿಗೆ ಬಂದ ಬಳಿಕ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
‘ಯಾರಿಗಾದರೂ ಹೇಳಿದರೆ TC ಕೊಡುತ್ತೇನೆ’?
ಇನ್ನು ಹಲ್ಲೆ ನಡೆಸಿದ ಬಳಿಕ ಘಟನೆ ಕುರಿತು ಶಾಲೆಯಲ್ಲಿ ಅಥವಾ ಹೊರಗೆ ಯಾರಿಗಾದರೂ ಮಾಹಿತಿ ನೀಡಿದರೆ ವಿದ್ಯಾರ್ಥಿಗೆ ಟಿಸಿ ನೀಡಿ ಶಾಲೆಯಿಂದ ಹೊರಗೆ ಕಳುಹಿಸುವುದಾಗಿ ಶಿಕ್ಷಕರು ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಈ ಬೆದರಿಕೆಯ ಕಾರಣದಿಂದ ವಿದ್ಯಾರ್ಥಿ ಆರಂಭದಲ್ಲಿ ಘಟನೆಯ ಬಗ್ಗೆ ಬಹಿರಂಗವಾಗಿ ಹೇಳಲು ಹೆದರಿದ್ದ ಎನ್ನಲಾಗಿದೆ. ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ಹಿನ್ನೆಲೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಂದೆಯಿಂದ ಪೊಲೀಸ್ ಠಾಣೆಗೆ ದೂರು
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಂದೆ ವಾಸಿಮ್ ಷರೀಫ್ ಅವರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗನ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ್ದು, ಘಟನೆ ಕುರಿತು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಂದೆಯ ದೂರನ್ನು ಆಧರಿಸಿ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕನ ವಿರುದ್ಧ ಹಲ್ಲೆ ಹಾಗೂ ಬೆದರಿಕೆ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗೆ ಯಾವ ರೀತಿಯ ಗಾಯವಾಗಿದೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ, ವಿದ್ಯಾರ್ಥಿ ಹಾಗೂ ಶಾಲೆಯ ಆಡಳಿತ ಮಂಡಳಿಯವರಿಂದ ಪೊಲೀಸರು ಮಾಹಿತಿ ಪಡೆಯುವ ಸಾಧ್ಯತೆಯಿದೆ.





