ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇವತ್ತು ಅದ್ಧೂರಿಯಾಗಿ ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಈ ಮಹಾಮೇಳ, ಪ್ರತಿ ದಿನವೂ ವೀಕ್ಷಕರನ್ನು ಟಿವಿ ಮುಂದೆ ಕೂರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಅನೇಕ ತಿರುವು-ಮುರುವು, ಭಾವುಕ ಕ್ಷಣಗಳು, ಜಗಳ, ಸ್ನೇಹ, ನಗು-ಅಳು ಎಲ್ಲವನ್ನೂ ಒಟ್ಟಿಗೆ ಹೊತ್ತುಕೊಂಡು ಸೀಸನ್ 12 ತನ್ನ ಅಂತಿಮ ಘಟ್ಟ ತಲುಪಿದೆ. ಕೊನೆಗೂ ಕರ್ನಾಟಕದ ಜನರು ತಮ್ಮ ತೀರ್ಪು ನೀಡಿದ್ದಾರೆ. ಗಿಲ್ಲಿ ಬಿಗ್ ಬಾಸ್ 12ರ ವಿನ್ನರ್ ಆಗಿ ಹೊರಹೊಮ್ಮಿದರೆ, ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಸೀಸನ್ ಆರಂಭದಿಂದಲೇ ರಕ್ಷಿತಾ ಶೆಟ್ಟಿ ವೀಕ್ಷಕರ ಗಮನ ಸೆಳೆದವರು. ಪಟ ಪಟ ಪಟಾಕಿ ಟಾಕಿಂಗ್ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ, ಸಾದಾ-ಸೀದಾ ಮನಸ್ಸಿನ ಹುಡುಗಿ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ, ಮುಚ್ಚುಮರೆ ಇಲ್ಲದೆ ಹೇಳುವ ಗುಣವೇ ರಕ್ಷಿತಾರ ದೊಡ್ಡ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಮನೆಯೊಳಗೆ ಅನೇಕ ಬಾರಿ ತಮ್ಮ ನಿಲುವಿಗಾಗಿ ನಿಂತು, ಕೆಲವೊಮ್ಮೆ ಟೀಕೆಗೆ ಗುರಿಯಾದರೂ, ಅದೇ ರೀತಿ ಅಭಿಮಾನಿಗಳ ಅಪಾರ ಬೆಂಬಲವೂ ರಕ್ಷಿತಾಗೆ ಸಿಕ್ಕಿತ್ತು.
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು. ಮೂಲತಃ ಮಂಗಳೂರಿನವರು, ಪಡುಬಿದ್ರೆಯಲ್ಲಿ ಜನನ. ಬಾಲ್ಯ ಹಾಗೂ ಶಿಕ್ಷಣದ ಬಹುಪಾಲು ಮುಂಬೈನಲ್ಲಿ ಕಳೆದಿದೆ. ಮನೆಯೊಳಗೆ ತುಳು ಮಾತನಾಡುವ ರಕ್ಷಿತಾಗೆ ಆರಂಭದಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೆ, ಭಾಷೆಯೇ ಅಡ್ಡಿ ಆಗಲಿಲ್ಲ ಎಂಬುದನ್ನು ಅವರು ತಮ್ಮ ಆಟದ ಮೂಲಕ ಸಾಬೀತುಪಡಿಸಿದರು.
ಸೋಶಿಯಲ್ ಮೀಡಿಯಾ ಯೂಟ್ಯೂಬರ್ ಆಗಿ ಈಗಾಗಲೇ ಹೆಸರು ಮಾಡಿದ್ದ ರಕ್ಷಿತಾ, ಕನ್ನಡ, ತುಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ವ್ಲಾಗ್ಸ್ ಹಾಗೂ ರೀಲ್ಸ್ ಮೂಲಕ ಅಭಿಮಾನಿಗಳ ಬಳಗ ಕಟ್ಟಿಕೊಂಡಿದ್ದರು. ಆನ್‌ಲೈನ್ ಜಗತ್ತಿನಲ್ಲಿ ಹವಾ ಎಬ್ಬಿಸಿದ್ದ ಈ ಪಟಾಕಿ ಪೋರಿ, ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ಬಳಿಕ ಕರ್ನಾಟಕದ ಮೂಲೆ ಮೂಲೆಗೂ ಪರಿಚಿತರಾದರು. ಪ್ರತಿದಿನದ ಎಪಿಸೋಡ್‌ಗಳಲ್ಲಿ ಅವರ ಮಾತು, ಪ್ರತಿಕ್ರಿಯೆ, ನಗುವಿನ ಸ್ಟೈಲ್, ಕೆಲವೊಮ್ಮೆ ಕಣ್ಣೀರಿನ ಕ್ಷಣಗಳು ಎಲ್ಲವೂ ಪ್ರೇಕ್ಷಕರಿಗೆ ತಮ್ಮದೇ ಮನೆಯ ಸದಸ್ಯೆಯಂತೆ ಅನಿಸಿತು.
ಟ್ರೋಫಿ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ‘ರಕ್ಷಿತಾ ವಿನ್ನರ್’ ಅನ್ನೋ ಟ್ರೆಂಡ್ ಕೂಡ ಹಲವು ಬಾರಿ ಓಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬಿಗ್ ಬಾಸ್ ಟೈಟಲ್ ಕೈ ತಪ್ಪಿದೆ. ಆದರೂ, ಈ ಸೋಲು ರಕ್ಷಿತಾಗೆ ಸೋಲಾಗಲೇ ಇಲ್ಲ. ಕಾರಣ, ಅವರು ಗೆದ್ದಿದ್ದು ಟ್ರೋಫಿಯನ್ನಲ್ಲ, ಕೋಟ್ಯಾಂತರ ಕನ್ನಡಿಗರ ಮನಸ್ಸುಗಳನ್ನು. ಆದರೆ ಬಿಗ್ ಬಾಸ್ ವೇದಿಕೆ ರಕ್ಷಿತಾ ಶೆಟ್ಟಿಗೆ ಹೊಸ ಬದುಕಿನ ದಾರಿಯನ್ನು ತೆರೆದಿದೆ.





