ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದ್ದು, ಈ ಸೀಸನ್‌ನ ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ‘ರಾಜಮಾತೆ’ ಎಂದೇ ಖ್ಯಾತರಾದ ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಫಿನಾಲೆ ವೇದಿಕೆಯಲ್ಲಿ ಹೆಸರು ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಅಶ್ವಿನಿಯೇ ವಿನ್ನರ್ ಆಗಬಹುದು” ಎಂಬ ನಿರೀಕ್ಷೆಯೂ ವ್ಯಾಪಕವಾಗಿತ್ತು.
ಶನಿವಾರದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು, ಈ ಬಾರಿ ವಿನ್ನರ್ ಮತ್ತು ರನ್ನರ್ ಅಪ್ ನಡುವಿನ ವೋಟ್ ವ್ಯತ್ಯಾಸ ಬಹಳ ಕಡಿಮೆ ಇದೆ ಎಂದು ಹೇಳಿದ್ದರು. ಅದರಿಂದಲೇ ಅಶ್ವಿನಿ ಗೌಡ ಹೆಸರು ಅಂತಿಮ ಕ್ಷಣದವರೆಗೂ ಚರ್ಚೆಯಲ್ಲಿತ್ತು. ಅಂತಿಮವಾಗಿ ಅವರು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, 14 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಈ ಸೀಸನ್ ಆರಂಭದಿಂದಲೇ ಅಶ್ವಿನಿ ಗೌಡ ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದರು. ಜೋರಾಗಿ ಮಾತನಾಡುವ, ಜಗಳ ಮಾಡುವ ತಂತ್ರಕ್ಕಿಂತ ಸೈಲೆಂಟ್, ಸ್ಟ್ರಾಟೆಜಿಕ್ ಆಟ ಅವರ ಶಕ್ತಿ ಆಗಿತ್ತು. ಇದೇ ಕಾರಣಕ್ಕೆ ಅವರು ಮನೆಮಂದಿಯಿಂದಲೂ ಹಾಗೂ ವೀಕ್ಷಕರಿಂದಲೂ ‘ರಾಜಮಾತೆ’ ಎಂಬ ಬಿರುದಿಗೆ ಪಾತ್ರರಾದರು.
ಬಹುತೇಕ ವೀಕ್ಷಕರ ಅಭಿಪ್ರಾಯದಂತೆ, ಗಿಲ್ಲಿ ನಟ ವಿನ್ನರ್ ಆಗಬಹುದು ಎಂಬ ಮಾತು ಜೋರಾಗಿತ್ತು. ಆದರೆ ಅಶ್ವಿನಿ ಗೌಡ ಅವರು ಕೊನೆಯವರೆಗೂ ಗಿಲ್ಲಿಗೆ ತೀವ್ರ ಪೈಪೋಟಿ ನೀಡಿದರು. ವಿಶೇಷವಾಗಿ ಟಾಸ್ಕ್‌ಗಳಲ್ಲಿ ಅವರ ಪ್ರದರ್ಶನ, ತಾಳ್ಮೆ, ಅವರನ್ನು ಟಾಪ್ ಸ್ಪರ್ಧಿಗಳ ಸಾಲಿನಲ್ಲಿ ನಿಲ್ಲಿಸಿತು.
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಅವರು ತೆಗೆದುಕೊಂಡ ನಿಲುವಿಗೆ ಹೊರಗಡೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯಿತು. ಹಲವಾರು ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಅಶ್ವಿನಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ, ವೋಟ್ ಮಾಡುವಂತೆ ಮನವಿ ಮಾಡಿದ್ದರು.
ಮನೆಯೊಳಗೆ ಅಶ್ವಿನಿ ಬಗ್ಗೆ ಹೆಚ್ಚಾಗಿ ಕೇಳಿಬಂದ ಪದ ಎಂದರೆ “ಅಶ್ವಿನಿ ಮೇಡಂ 2.0”. ಗಿಲ್ಲಿ ಅವರು ಅಶ್ವಿನಿ ಸೈಲೆಂಟ್ ಆಗಿರುವುದನ್ನೇ ಆಧಾರವಾಗಿ ನಾಮಿನೇಷನ್ ವೇಳೆ ಟೀಕೆ ಮಾಡುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, “ಸೈಲೆಂಟ್ ಆಗಿರೋದು ಅಂದರೆ ಏನೂ ಮಾಡದೇ ಕುಳಿತಿರೋದು ಅಲ್ಲ. ಮನೆಯಲ್ಲಿ ಕೆಲಸ, ಅಡುಗೆ, ಟಾಸ್ಕ್, ಜವಾಬ್ದಾರಿ ಎಲ್ಲವೂ ಮಾಡುತ್ತಿದ್ದೇನೆ” ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 12 ಅಶ್ವಿನಿ ಗೌಡ ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.





