ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಬೆಂಗಳೂರಿನ ಜಾಲಿವುಡ್ ಸ್ಟುಡಿಯೋ ಮುಂಭಾಗ ಅಪಾರ ಜನಸಾಗರ ಹರಿದು ಬಂದಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಬೆಂಬಲಿಸಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣವೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಭಾರೀ ಭದ್ರತೆ ಕೈಗೊಂಡಿದ್ದರೂ ಕೆಲ ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿ, ಲಘು ಲಾಠಿ ಚಾರ್ಜ್ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು.
ಈ ಬಾರಿ ಬಿಗ್ ಬಾಸ್‌ಗೆ ದೊರೆತಿರುವ ಕ್ರೇಜ್ ಹಿಂದೆಂದೂ ಕಂಡಿರಲಿಲ್ಲ. ಫಿನಾಲೆ ದಿನವೇ ಬೆಳಿಗ್ಗೆಯಿಂದಲೇ ಜಾಲಿವುಡ್ ಸ್ಟುಡಿಯೋ ಸುತ್ತಮುತ್ತ ಜನರು ಗುಂಪುಗೂಡಲಾರಂಭಿಸಿದರು. ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ರಸ್ತೆಗಳಲ್ಲಿ ಸಂಚಾರಕ್ಕೂ ಅಡ್ಡಿ ಉಂಟಾಯಿತು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಆದರೂ ಅಭಿಮಾನಿಗಳ ಗದ್ದಲವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟವಾಯಿತು.
ಕೆಲ ಅಭಿಮಾನಿಗಳು ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ತಳ್ಳಾಟ-ಒತ್ತಾಟ ನಡೆದಿದ್ದು, ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದವೂ ನಡೆದಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಕಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಶಿಸ್ತು ಕಾಪಾಡುವಂತೆ ಪೊಲೀಸರು ಪದೇಪದೆ ಎಚ್ಚರಿಕೆ ನೀಡಿದರು.
ಇನ್ನೊಂದೆಡೆ, ರಸ್ತೆಗಳಲ್ಲಿ ಬೈಕ್‌ಗಳನ್ನು ತಂದು ಕರ್ಕಶ ಹಾರ್ನ್, ಬುಲೆಟ್ ಸೌಂಡ್ ಮಾಡುತ್ತಿದ್ದ ಪುಂಡರ ವಿರುದ್ಧವೂ ಪೊಲೀಸರು ಕಠಿಣ ಕ್ರಮ ಕೈಗೊಂಡರು. ಅನವಶ್ಯಕವಾಗಿ ಗದ್ದಲ ಸೃಷ್ಟಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬೈಕ್ ಸವಾರರಿಗೆ ಲಾಠಿ ಏಟು ಬಿದ್ದಿತ್ತು.. ಕೆಲ ಹೊತ್ತು ಜಾಲಿವುಡ್ ಸುತ್ತಮುತ್ತ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಫಿನಾಲೆ ಸಂಭ್ರಮದ ಭಾಗವಾಗಿ ಸ್ಪರ್ಧಿಗಳ ಕಟೌಟ್‌ಗಳು, ಪೋಸ್ಟರ್‌ಗಳು, ಬ್ಯಾನರ್‌ಗಳಿಂದ ಜಾಲಿವುಡ್ ಸುತ್ತಮುತ್ತ ತುಂಬಿತ್ತು. ವಿಶೇಷವಾಗಿ ಗಿಲ್ಲಿ ನಟ ಮತ್ತು ಕಾವ್ಯ ಅವರ ಭಾರೀ ಕಟೌಟ್‌ಗಳನ್ನು ಅಭಿಮಾನಿಗಳು ಸ್ಥಾಪಿಸಿದ್ದರು. ಹೂವಿನ ಹಾರಗಳನ್ನು ಹಾಕಿ, ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. “ಗಿಲ್ಲಿ ವಿನ್ನರ್” ಎಂಬ ಘೋಷಣೆಗಳು ನಿರಂತರವಾಗಿ ಮೊಳಗುತ್ತಿದ್ದು, ಹಬ್ಬದ ವಾತಾವರಣ ಕಾಣಿಸಿಕೊಂಡಿತು.
ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಕಾವ್ಯ, ರಘು, ಅಶ್ವಿನಿ ಗೌಡ ಮತ್ತು ಧನುಷ್ ಅಂತಿಮ ಸ್ಪರ್ಧಿಗಳಾಗಿ ಹಾಜರಿದ್ದರು. ಶೋ ಆರಂಭವಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ವಿನ್ನರ್ ಕುರಿತ ಚರ್ಚೆ ಜೋರಾಗಿತ್ತು. ಹಲವು ಪೇಜ್‌ಗಳು, ಅಭಿಮಾನಿ ಗುಂಪುಗಳು ಮತ್ತು ಕೆಲ ಮಾಜಿ ಸ್ಪರ್ಧಿಗಳು ಕೂಡ ಗಿಲ್ಲಿಯೇ ವಿನ್ನರ್ ಎಂದು ಪೋಸ್ಟ್ ಮಾಡುತ್ತಿದ್ದರು. ಕೆಲವರು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಎನ್ನುವ ಮಾಹಿತಿಯನ್ನೂ ಹಂಚಿಕೊಂಡರು.





