ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಶೋಗೆ ಪರಿಸರ ಉಲ್ಲಂಘನೆಯ ಆರೋಪದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬೀಗ ಹಾಕಿತ್ತು. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಜಿಲ್ಲಾಡಳಿತ ಮಧ್ಯರಾತ್ರಿ ಬೀಗ ತೆಗೆದು ಸ್ಪರ್ಧಿಗಳನ್ನು ಮರಳಿ ಮನೆಗೆ ಶಿಫ್ಟ್ ಮಾಡಿದೆ.
ಅಕ್ಟೋಬರ್ 7ರಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ (ವೆಲ್ಸ್ ಸ್ಟುಡಿಯೋಸ್ ಎಂದೂ ಕರೆಯಲಾಗುತ್ತದೆ) ದಾಳಿ ನಡೆಸಿ ಬೀಗ ಹಾಕಿದ್ದರು. ನೀರು ಮತ್ತು ವಾಯು ಮಾಲಿನ್ಯ ನಿಯಂತ್ರಣ ಕಾಯಿದೆಗಳ ಅಡಿಯಲ್ಲಿ ಅಗತ್ಯ ಅನುಮತಿಗಳನ್ನು ಪಡೆಯದೇ ಸ್ಟುಡಿಯೋ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಶೋನ ಸ್ಪರ್ಧಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣ ಹೊರಕಳುಹಿಸಲಾಯಿತು. ಸ್ಪರ್ಧಿಗಳನ್ನು ಹತ್ತಿರದ ರೆಸಾರ್ಟ್‌ಗೆ ಸ್ಥಳಾಂತರಿಸಲಾಯಿತು. ಆದರೆ, ಈ ಘಟನೆಯಿಂದ ಪ್ರಸಾರದಲ್ಲಿ ಅಡಚಣೆಯುಂಟಾಗಿ, ಮಂಗಳವಾರ ಕೇವಲ ಸಣ್ಣ ಎಪಿಸೋಡ್ ಪ್ರಸಾರವಾಗಿತ್ತು.
ಈ ಘಟನೆ ರಾಜಕೀಯ ವಿವಾದಕ್ಕೂ ಕಾರಣವಾಯಿತು. ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರ ‘ನಟ್ ಅಂಡ್ ಬೋಲ್ಟ್’ ಹೇಳಿಕೆಯನ್ನು ಗೇಲಿ ಮಾಡಿದ್ದರು. “ಬಿಗ್ ಬಾಸ್ ಸ್ಟುಡಿಯೋಗೆ ಬೀಗ ಹಾಕಿ ನಟ್ ಬೋಲ್ಟ್ ಟೈಟ್ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಎಸ್, “ಕುಮಾರಸ್ವಾಮಿ ಅವರಿಗೆ ನನ್ನ ಹೆಸರು ಉಚ್ಚರಿಸದೇ ನಿದ್ದೆ ಬರಲ್ಲ, ಶಾಂತಿ ಸಿಗಲ್ಲ” ಎಂದು ತಿರುಗೇಟು ನೀಡಿದ್ದರು.
ಆದರೆ, ಡಿಕೆ ಶಿವಕುಮಾರ್ ಅವರು ಸ್ಟುಡಿಯೋಗೆ ಬೆಂಬಲ ನೀಡಿ, “ಉದ್ಯೋಗ ಸೃಷ್ಟಿ ಮುಖ್ಯ. ಸ್ಟುಡಿಯೋಗೆ ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡಬೇಕು. ಬಿಗ್ ಬಾಸ್ ಮಾತ್ರವಲ್ಲ, ಎಲ್ಲಾ ಮನರಂಜನಾ ಕಾರ್ಯಕ್ರಮಗಳು ಮುಂದುವರಿಯಬೇಕು” ಎಂದು ಹೇಳಿದ್ದರು. ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಸಿ ಯಶವಂತ ಗುರುಕರ್ ಅವರೊಂದಿಗೆ ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಲು ಒಂದು ಬಾರಿಯ ಅವಕಾಶ ನೀಡುವಂತೆ ಸೂಚಿಸಿದ್ದರು.
ಅಕ್ಟೋಬರ್ 9ರ ಮಧ್ಯರಾತ್ರಿ 2:42ರ ಸುಮಾರಿಗೆ ಈ ಸೂಚನೆ ಜಾರಿಯಾಯಿತು. ಜಿಲ್ಲಾಧಿಕಾರಿ ಯಶವಂತ ಗುರುಕರ್ ಮತ್ತು ಬೆಂಗಳೂರು ದಕ್ಷಿಣ ಎಸ್‌ಪಿ ಶ್ರೀನಿವಾಸ ಗೌಡ ಅವರ ಸಮ್ಮುಖದಲ್ಲಿ ಜಾಲಿವುಡ್ ಸ್ಟುಡಿಯೋದ ಗೇಟ್ ಸಿ ಮಾತ್ರ ತೆರೆಯಲಾಯಿತು. ಎರಡು ದಿನಗಳಿಂದ ಬಂದ್ ಆಗಿದ್ದ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಮರಳಿ ಪ್ರವೇಶಿಸಿದರು. “ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ಗೇಟ್ ಓಪನ್ ಮಾಡಲಾಗಿದೆ. ಕೇವಲ ಬಿಗ್ ಬಾಸ್ ಕೆಲಸಗಳಿಗೆ ಮಾತ್ರ ಅವಕಾಶ. ಸ್ಟುಡಿಯೋದಲ್ಲಿ ಇತರ ಚಟುವಟಿಕೆಗಳಿಗೆ ಅನುಮತಿ ಇಲ್ಲ” ಎಂದು ಡಿಸಿ ಯಶವಂತ ಗುರುಕರ್ ತಿಳಿಸಿದ್ದಾರೆ.