ಒಟ್ಟಾವ: ಕೆನಡಾದಲ್ಲಿ ರೋಗಿಯೊಂದಿಗೆ ಲೈಂಗಿಕ ಸಂಪರ್ಕದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತುಗೊಳಿಸಲಾಗಿದೆ.
ವೈದ್ಯೆ ಸುಮನ್ ಖುಲ್ಬೆ ಅವರು ಪುರುಷ ರೋಗಿಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ, ಇನ್ನಿಬ್ಬರ ರೋಗಿಗಳೊಂದಿಗೆ ವೃತ್ತಿಪರವಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಒಂಟಾರಿಯೊದ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಕಾಲೇಜು (College of Physicians and Surgeons of Ontario) ವೈದ್ಯರು ಮತ್ತು ರೋಗಿಗಳ ನಡುವಿನ ಲೈಂಗಿಕ ಸಂಪರ್ಕವನ್ನು ಗಂಭೀರ ಅಪರಾಧವೆಂದು ಪರಿಗಣಿಸುತ್ತದೆ. ಇಂತಹ ತಪ್ಪಿತಸ್ಥರ ವಿರುದ್ಧ ಯಾವುದೇ ಸಹಿಷ್ಣುತೆ ತೋರದಿರುವ ನೀತಿಯನ್ನು ಕಾಲೇಜು ಅನುಸರಿಸುತ್ತದೆ.
ತನಿಖಾ ಸಮಿತಿಯು ಖುಲ್ಬೆ ಅವರ ನಡವಳಿಕೆಯನ್ನು ಪರಿಶೀಲಿಸಿದೆ. ರೋಗಿಗಳನ್ನು ಕೇವಲ ರೋಗಿಗಳಾಗಿ ಕಾಣದೆ, ಸ್ನೇಹಿತರು ಅಥವಾ ಪಾಲುದಾರರಂತೆ ವರ್ತಿಸಿದ್ದಾರೆ ಎಂದು ಸಮಿತಿ ತೀರ್ಮಾನಿಸಿದೆ. ಈ ಕಾರಣದಿಂದಾಗಿ, ಸುಮನ್ ಖುಲ್ಬೆ ಅವರ ವೈದ್ಯಕೀಯ ಲೈಸೆನ್ಸ್ ಅಮಾನತುಗೊಳಿಸಲು ಒಂಟಾರಿಯೊ ಕಾಲೇಜು ನಿರ್ಧರಿಸಿದೆ ಎಂದು ತಿಳಿದುಬಂದಿದೆ.





